ಫೆ. 7ರಿಂದ ಕನ್ಯಾನ ಉರೂಸ್-ದರ್ಗಾ ಕಟ್ಟಡ ಉದ್ಘಾಟನೆ
ಬಂಟ್ವಾಳ, ನ. 27: ಬಂಟ್ವಾಳ ತಾಲೂಕಿನ ಕನ್ಯಾನ ರಹ್ಮಾನಿಯ ಜುಮಾ ಮಸೀದಿ ಪಶ್ಚಿಮ ಭಾಗದಲ್ಲಿ ಶತಮಾನದಿಂದಲೂ ಅಂತ್ಯ ವಿಶ್ರಮಗೊಳ್ಳುತ್ತಿರುವ ಹಝ್ರತ್ ಅಸ್ಸಯ್ಯಿದ್ ಶಾಹುಲ್ ಹಮೀದ್ ವಲಿಯುಲ್ಲಾಹಿ ಅವರ ಉರೂಸ್ ಮುಬಾರಕ್ ಫೆ.7ರಿಂದ 17ರವರೆಗೆ ಖಾಝಿ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಅವರ ಅಧ್ಯಕ್ಷತೆ ಯಲ್ಲಿ ನಡೆಯಲಿದ್ದು, 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ನವೀಕೃತ ದರ್ಗಾ ಕಟ್ಟಡ ಇದೇ ಸಂದರ್ಭ ಉದ್ಘಾಟನೆಗೊಳ್ಳಲಿದೆ ಎಂದು ಕನ್ಯಾನ ರಹ್ಮಾನಿಯ ಜುಮಾ ಮಸೀದಿ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಡಿ.ಕೆ ಇಬ್ರಾಹಿಂ ಷಾ ತಿಳಿಸಿದ್ದಾರೆ.
ಅವರು ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಾತಿ ಮತ ಪಂಥಗಳಿಲ್ಲದೇ ಸರ್ವ ಧರ್ಮ ಬಾಂಧವರು ದರ್ಗಾವನ್ನು ಕೋಮು ಸೌಹಾರ್ದತೆಯ ನೆಲೆಬೀಡಾಗಿ ಅಂಗೀಕರಿಸುತ್ತಾ ಹರಕೆ ನೀಡುತ್ತಾ ಬರುತ್ತಿದ್ದಾರೆ. ಅರ್ಧ ಶತಮಾನಕ್ಕಿಂತಲೂ ಹೆಚ್ಚು ಕಾಲ ತಾಜುಲ್ ಉಲಮಾ ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಕುಂಞಿಕೋಯ ತಂಙಳ್ ಅಲ್ ಬುಖಾರಿ ಅವರು ಕನ್ಯಾನದ ಖಾಝಿಯಾಗಿದ್ದರು. ಅವರ ಮರಣದ ನಂತರ ಅವರ ಪುತ್ರ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಅವರು ಖಾಝಿಯಾಗಿ ಮುನ್ನಡೆ ಸುತ್ತಿದ್ದಾರೆ ಎಂದು ಹೇಳಿದರು.
ಫೆ. 7ರಿಂದ 16ರ ತನಕ ಮತ ಪ್ರಭಾಷಣ ಹಾಗೂ 17ರಂದು ಉದಯಾಸ್ತಮಾನ ಉರೂಸ್ ಮತ್ತು ಅನ್ನದಾನ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕೇರಳ ಹಾಗೂ ಕರ್ನಾಟಕ ರಾಜ್ಯದ ಸಾದಾತುಗಳು ಹಾಗೂ ವಿದ್ವಾಂಸರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕನ್ಯಾನ ರಹ್ಮಾನಿಯ ಜುಮಾ ಮಸೀದಿ ಆಡಳಿತ ಸಮಿತಿ ಉಪಾಧ್ಯಕ್ಷ ಎಂ.ಕೆ ಮುಹಮ್ಮದ್ ಕುಂಞಿ ಹಾಜಿ, ಉರೂಸ್ ಕಮಿಟಿ ಸದಸ್ಯರಾದ ಅಬೂಬಕರ್ ಸಿದ್ದಿಕ್ ಪೊಯ್ಯಗದ್ದೆ, ಕೆ.ಎಂ. ಅಶ್ರಫ್ ಸಖಾಫಿ ಕನ್ಯಾನ, ಅಬ್ದುಲ್ ಹಮೀದ್ ಶೆಟ್ಟಿಬೆಟ್ಟು, ಅಬೂಬಕರ್ ಅಂಗ್ರಿ ಉಪಸ್ಥಿತರಿದ್ದರು.