ಮಂಗಳೂರು: ಸರ್ಫ್‍ರಾಝ್ ಜೆ. ಹಾಶಿಂರಿಗೆ ಡಾಕ್ಟರೇಟ್ ಪದವಿ

ಕೊಣಾಜೆ, ನ. 27: ಮಂಗಳೂರಿನ ಪಿ.ಎ. ಸಮೂಹ ಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕರಾಗಿರುವ ಪ್ರೊ. ಸರ್ಫ್‍ರಾಝ್ ಜೆ. ಹಾಶಿಂ ಅವರು ಮಂಡಿಸಿದ “ಸೈಕೋಸೊಮೇಟಿಕ್ ಡಿಸೋರ್ಡರ್ ಇನ್ ಸ್ಟೂಡೆಂಟ್ಸ್ ಆಂಡ್ ಇಟ್ಸ್ ಇಂಪಾಕ್ಟ್ ಆನ್ ಅಕಾಡೆಮಿಕ್ ಪರ್ಫಾಮೆನ್ಸ್ ಆಂಡ್ ವೆಲ್ ಬೀಯಿಂಗ್” ಎಂಬ ಮಹಾ ಪ್ರಬಂಧಕ್ಕೆ ಓಪನ್ ಇಂಟರ್‍ನ್ಯಾಶನಲ್ ಯುನಿವರ್ಸಿಟಿ ಫಾರ್ ಕಾಂಪ್ಲಿಮೆಂಟರಿ ಮೆಡಿಸನ್ ವಿಶ್ವವಿದ್ಯಾನಿಲಯವು ಡಾಕ್ಟರ್ ಆಫ್ ಫಿಲೋಸಫಿ (ಪಿಎಚ್‍ಡಿ) ಪದವಿಯನ್ನು ನೀಡಿ ಗೌರವಿಸಿದೆ.
ಖ್ಯಾತ ಮನಶಾಸ್ತ್ರಜ್ಞ ಹಾಗೂ ವಿವಿಧ ವಿಶ್ವವಿದ್ಯಾನಿಲಯಗಳ ರಿಸರ್ಚ್ ಗೈಡ್ ಆಗಿರುವ ಕೊಟ್ಟಾಯಂನ ಪ್ರೊ. ಡಾ. ಆರ್. ಸುರೇಶ್ ಅವರ ಮಾರ್ಗದರ್ಶನದಲ್ಲಿ ಅವರು ಈ ಮಹಾಪ್ರಬಂಧವನ್ನು ಸಿದ್ಧಪಡಿಸಿದ್ದಾರೆ. ನ. 25ರಂದು ಶ್ರೀಲಂಕಾದ ಕೊಲೊಂಬೋದಲ್ಲಿನ ಬಂಡಾರ ನಾಯಕೇ ಮೆಮೋರಿಯಲ್ ಇಂಟರ್‍ನ್ಯಾಶನಲ್ ಕಾನ್ಫ್‍ರೆನ್ಸ್ ಸಭಾಂಗಣದಲ್ಲಿ ಜರುಗಿದ ಪದವಿ ಪ್ರಧಾನ ಕಾರ್ಯಕ್ರಮದಲ್ಲಿ ಈ ಡಾಕ್ಟರೇಟ್ ಪದವಿಯನ್ನು ಪ್ರಧಾನ ಮಾಡಲಾಗಿದೆ.
ಮಂಗಳೂರು ನಗರದ ಮಾರ್ನಮಿಕಟ್ಟೆಯ ಹಾಜಿ ಮಹಮ್ಮದ್ ಉಚ್ಚಿಲ್ ಮತ್ತು ದಿ. ತಸ್ನೀಮ್ ದಂಪತಿಯ ಪುತ್ರರಾಗಿ ಜನಿಸಿದ ಸರ್ಫ್‍ರಾಝ್ ಜೆ. ಹಾಶಿಂರವರು ಭೌತ ಶಾಸ್ತ್ರದಲ್ಲಿ ಸ್ನಾತಕೋತ್ತರ ಮತ್ತು ಎಂ.ಫಿಲ್., ಮನಶಾಸ್ತ್ರದಲ್ಲಿ ಎಂ.ಎಸ್ಸಿ. ಹಾಗೂ ಎಂ.ಬಿ.ಎ. ಪದವೀಧರರಾಗಿರುವ ಇವರು ಮಂಗಳೂರಿನ ಖ್ಯಾತ ಮೈಂಡ್ ಪವರ್ ತರಬೇತಿ ಸಂಸ್ಥೆಯಾದ ಸಾಧನ ಮೈಂಡ್ ಕೇರ್ ಅಕಾಡೆಮಿಯನ್ನು ಸ್ಥಾಪಿಸಿ ವಿವಿಧ ರಾಷ್ಟ್ರಗಳಲ್ಲಿ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಮತ್ತು ಸಾರ್ವಜನಿಕರಿಗೆ ಮನಶಕ್ತಿ ತರಬೇತಿಯನ್ನು ನಡೆಸುತ್ತಿದ್ದಾರೆ.