ಕಿಂಗ್ಪಿನ್ ಶಿವಕುಮಾರ್ ತೀವ್ರ ವಿಚಾರಣೆ: ಆರೋಪಿ ಜೊತೆ ಕೈಜೋಡಿಸಿದ ಪೊಲೀಸರು ?
ಪೊಲೀಸ್ ನೇಮಕಾತಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ

ಸಾಂದರ್ಭಿಕ ಚಿತ್ರ
ಬೆಂಗಳೂರು, ನ.27: ನಾಗರಿಕ ಪೊಲೀಸ್ ಪೇದೆ ಲಿಖಿತ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಪ್ರಮುಖ ರೂವಾರಿ ಶಿವಕುಮಾರ್ ಅನ್ನು ಸಿಸಿಬಿ ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿದ್ದು, ಕೆಲ ಪೊಲೀಸರು ಆರೋಪಿಯ ಜೊತೆ ಕೈಜೋಡಿಸಿರುವ ಅಂಶ ಬೆಳಕಿಗೆ ಬಂದಿದೆ ಎಂದು ಹೇಳಲಾಗುತ್ತಿದೆ.
ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಶಿವಕುಮಾರ್ ಮಹತ್ವದ ವಿಷಯ ಬಾಯಿ ಬಿಟ್ಟಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಈತನ ಹಿಂದೆ ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳು ಇರುವ ಗುಮಾನಿ ಕೇಳಿ ಬಂದಿದೆ. ಮಂಗಳವಾರ ಆರೋಪಿ ಶಿವಕುಮಾರ್ನನ್ನು ಸಿಸಿಬಿ ತನಿಖಾಧಿಕಾರಿಗಳು ಕರೆದೊಯ್ದು ಸ್ಥಳ ಮಹಜರ್ ನಡೆಸಿದ್ದಾರೆ. ಸ್ಥಳ ಮಹಜರು ನಡೆಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನಂತರ ನಗರಕ್ಕೆ ಕರೆತಂದಿದ್ದಾರೆ.
ನಾಗರಿಕ ಪೊಲೀಸ್ ಪೇದೆ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಪೊಲೀಸರು ಇದುವರೆಗೂ ಸುಮಾರು 115 ಮಂದಿಯನ್ನ ಜೈಲಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಶ್ನೆ ಪತ್ರಿಕೆಗಳು ಸಿಗುತ್ತೆ ಎಂಬ ದುರಾಸೆಯಲ್ಲಿದ್ದ ಹಲವಾರು ವಿದ್ಯಾರ್ಥಿಗಳು ಶಿವಕುಮಾರಸ್ವಾಮಿಗೆ, ಹಣ ಕೊಟ್ಟು ಪ್ರಶ್ನೆ ಪತ್ರಿಕೆ ಪಡೆದಿದ್ದರು.
ಇದೀಗ ಅವರನೆಲ್ಲಾ ಸಿಸಿಬಿ ಪೊಲೀಸರು ಜೈಲಿಗೆ ಅಟ್ಟಿ ತನಿಖೆ ನಡೆಸುತ್ತಿದ್ದಾರೆ. ಮತ್ತೊಬ್ಬ ಪ್ರಮುಖ ಆರೋಪಿ ಬಸವರಾಜ್ ಮರೆಸಿಕೊಂಡಿದ್ದು, ಆತನನ್ನು ಸೆರೆ ಹಿಡಿಯಲು ಸಿಸಿಬಿ ತಂಡ ಬಲೆ ಬೀಸಿದೆ. ಬಸವರಾಜ್ ಸುಮಾರು 3 ಸಾವಿರ ಪ್ರಶ್ನೆ ಪತ್ರಿಕೆಗಳನ್ನ ಜೆರಾಕ್ಸ್ ಮಾಡಿಸಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆ.
ಈ ಹಿಂದೆ ಆರೋಪಿ ಶಿವಕುಮಾರ್ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿ ಒಮ್ಮೆ ಜೈಲು ಸೇರಿದ್ದ. ಇದೀಗ ಮತ್ತೆ ಅದೇ ರೀತಿಯ ಪ್ರಕರಣದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆರೋಪಿ ಶಿವಕುಮಾರ್ಗೆ ಇರುವ ಲಿಂಕ್ಗಳ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಅಲ್ಲದೇ ಶಿವಕುಮಾರ್ ಮೇಲೆ ಕೋಕಾ ಕಾಯ್ದೆ ದಾಖಲಿಸಲು ವುುಂದಾಗಿರುವುದಾಗಿ ಹೇಳಲಾಗುತ್ತಿದೆ.







