‘ಚಂದನವನದ ಗಂಧದ ಕುಡಿ’ ಮುಡಿಗೆ ಅಂತಾರಾಷ್ಟ್ರೀಯ ಪ್ರಶಸ್ತಿಗಳ ಗರಿ

ಮಂಗಳೂರು, ನ. 27: ನಗರದ ಇನ್ವೆಂಜರ್ ಟೆಕ್ನಾಲಜೀಸ್ ಬ್ಯಾನರ್‌ನಲ್ಲಿ ಕೆ.ಸತ್ಯೇಂದ್ರ ಪೈ ಹಾಗೂ ಕೆ.ಮೋಹನ್ ಪೈ ನಿರ್ಮಾಣದಲ್ಲಿ ಇಮ್ಯಾಜಿನೇಶನ್ ಮೂವೀಸ್‌ನ ಸಂತೋಷ್ ಶೆಟ್ಟಿ ಕಟೀಲು ನಿರ್ದೇಶನದ ‘ಗಂಧದ ಕುಡಿ/ಚಂದನವನ’ ಚಲನಚಿತ್ರಕ್ಕೆ ನ.25ರಂದು ಮುಂಬೈಯಲ್ಲಿ ನಡೆದ ಮೂನ್‌ವೈಟ್ ಚಲನಚಿತ್ರೋತ್ಸವದಲ್ಲಿ 4 ಅಂತರಾಷ್ಟ್ರೀಯ ಪ್ರಶಸ್ತಿಗಳು ಒಲಿದಿವೆ.
ಆಗಸ್ಟ್ ತಿಂಗಳಿನಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾದ ‘ಸ್ಯಾನ್ ಡಿಯಾಗೋ ಅಂತರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ’ದಲ್ಲಿ ಅತ್ಯುತ್ತಮ ಕೌಟುಂಬಿಕ ಚಲನಚಿತ್ರ, ಅಕ್ಟೋಬರ್ ತಿಂಗಳಿನಲ್ಲಿ ಕೊಲ್ಕತ್ತಾದಲ್ಲಿ ನಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಅತ್ಯುತ್ತಮ ಚಲನಚಿತ್ರ’ ಹಾಗೂ ಚಿತ್ರದ ಹಿನ್ನಲೆ ಸಂಗೀತಕ್ಕಾಗಿ ಪ್ರಸಾದ್ ಕೆ ಶೆಟ್ಟಿ ‘ಅತ್ಯುತ್ತಮ ಹಿನ್ನೆಲೆ ಸಂಗೀತ’ ಪ್ರಶಸ್ತಿಗಳನ್ನು ಪಡೆದಿದೆ.
ನ. 24 ಮತ್ತು 25ರಂದು ಮುಂಬೈಯಲ್ಲಿ ನಡೆದ ‘ಮೂನ್‌ವೈಟ್ ಫಿಲಂಸ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವ’ದಲ್ಲಿ ‘ಅತ್ಯುತ್ತಮ ಚಿತ್ರ’, ‘ಅತ್ಯುತ್ತಮ ನಿರ್ದೆಶಕ’ ಪ್ರಶಸ್ತಿ ಸಹಿತ ಪ್ರಶಸ್ತಿಗಳನ್ನು ಬರಸೆಳೆದು ಬಾಚಿಕೊಂಡಿದೆ. ಚಿತ್ರರಂಗದಲ್ಲಿ ಮೊಟ್ಟ ಮೊದಲ ಬಾರಿಗೆ ವಿಭಿನ್ನ ಶೈಲಿಯಲ್ಲಿ ನಿರ್ದೇಶಿಸಿದ್ದು, ಅತೀ ಶೀಘ್ರದಲ್ಲಿ ತೆರೆ ಕಾಣಲಿದೆ ಎಂದು ಚಿತ್ರದ ನಿರ್ಮಾಪಕ ಸತ್ಯೇಂದ್ರ ಪೈ ತಿಳಿಸಿದರು.
ಮುಂಬೈನ ‘ಮೂನ್‌ವೈಟ್ ಫಿಲಂಸ್’ ಆಯೋಜಿಸಿರುವ ‘ಮೂನ್‌ವೈಟ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವ’ದಲ್ಲಿ ಭಾರತದ ವಿವಿಧ ಭಾಷೆಗಳ ಹಾಗೂ ವಿದೇಶಗಳ ಸಾವಿರಕ್ಕೂ ಅಧಿಕ ಚಲನಚಿತ್ರಗಳು ಈ ಚಲನಚಿತ್ರೋತ್ಸವದಲ್ಲಿ ತೆರೆಕಂಡವು. ಸುಮಾರು 50 ವಿಭಾಗಗಳಲ್ಲಿ ವಿವಿಧ ಪ್ರಶಸ್ತಿಗಳನ್ನು ನೀಡಲಾಗಿದೆ.
ಅವುಗಳಲ್ಲಿ ‘ಗಂಧದ ಕುಡಿ/ಚಂದನವನ’ ಚಲನಚಿತ್ರವು ‘ಅತ್ಯುತ್ತಮ ಚಲನಚಿತ್ರ’ ಪ್ರಶಸ್ತಿ ಪಡೆದಿದ್ದು, ಚಿತ್ರದ ನಿರ್ದೇಶನಕ್ಕಾಗಿ ಸಂತೋಷ್‌ಕುಮಾರ್ ಕಟೀಲು ಅವರಿಗೆ ‘ಅತ್ಯುತ್ತಮ ನಿರ್ದೇಶಕ’, ಹಾಗೂ ಚಿತ್ರದಲ್ಲಿನ ನಟನೆಗಾಗಿ ಕನ್ನಡ ಚಿತ್ರರಂಗದ ಹಿರಿಯ ನಟ ರಮೇಶ್ ಭಟ್ ಹಾಗೂ ಕಿರುತೆರೆ ನಟಿ ಜ್ಯೋತಿ ರೈ ಅವರಿಗೆ ‘ಅತ್ಯುತ್ತಮ ನಟ’, ‘ಅತ್ಯುತ್ತಮ ನಟಿ’ ಜೊತೆಗೆ ಚಿತ್ರದಲ್ಲಿ ನಟಿಸಿದ ಬಾಲನಟರಾದ ಬೇಬಿ ನಿಧಿ ಸಂಜೀವ ಶೆಟ್ಟಿ, ಬೇಬಿ ಕೀಷಾ, ಮಾಸ್ಟರ್ ವಿಘ್ನೇಶ್, ಮಾಸ್ಟರ್ ಶ್ರೀಶ ಶೆಟ್ಟಿ, ಮಾಸ್ಟರ್ ಶ್ರೇಯಸ್ ಶೆಟ್ಟಿ, ಬೇಬಿ ಆ್ಯಶ್ಲಿನ್ ಡಿಸೋಜ, ಬೇಬಿ ಪ್ರಣತಿ ಮೂನ್‌ವೈಟ್ ಫಿಲಂಸ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ವಿಶೇಷ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ನ.25ರಂದು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚಿತ್ರದ ನಿರ್ಮಾಪಕ ಸತ್ಯೇಂದ್ರ ಪೈ, ಸಹನಿರ್ದೇಶಕಿ ಪ್ರೀತಾ ಮಿನೇಜಸ್, ಸಂಗೀತ ನಿರ್ದೇಶಕ ಪ್ರಸಾದ್ ಕೆ. ಶೆಟ್ಟಿ, ಕನ್ನಡ ಚಿತ್ರರಂಗದ ಹಿರಿಯ ನಟ ರಮೇಶ್ ಭಟ್, ಬಾಲನಟಿ ನಿಧಿ ಸಂಜೀವ ಶೆಟ್ಟಿ, ಖಳನಟನಾಗಿ ಪಾತ್ರವಹಿಸಿದ ಮುಂಬೈಯ ಅರವಿಂದ್ ಶೆಟ್ಟಿ ಕೊಜಕ್ಕೂಳಿ ಪಾಲ್ಗೊಂಡು ಪ್ರಶಸ್ತಿಗಳನ್ನು ಸ್ವೀಕರಿಸಿದರು.
ಮುಂಬೈಯ ಮಲಾಡ್ ಆಸ್ಪೀ ಆಡಿಟೋರಿಯಮ್‌ನಲ್ಲಿ ನಡೆದ ಸಮಾರಂಭದಲ್ಲಿ ಪದ್ಮಶ್ರೀ ವಿಜೇತ ಭಜನ್ ಸಾಮ್ರಾಟ್ ಅನೂಪ್ ಜಲೋಟ್, ಬ್ರೈಟ್ ಔಟ್‌ಡೋರ್ ಮಿಡಿಯಾ ಮುಖ್ಯಸ್ಥ ಯೊಗೇಶ್ ಲಕಾನಿ, ಪಾಪು ಮಾಲು, ರಾಹಾತ್ ಜಿಯಾ, ಅರ್.ಡಿ. ತ್ಯಾಗಿ, ಇಂಡಿಯನ್ ಐಡಲ್ ಖ್ಯಾತ ರವಿ ತ್ರಿಪಾತಿ, ಮೂನ್‌ವೈಟ್ ಸ್ಥಾಪಕ ದೆರ್ವಾಶಿಶ್ ಸರಗಮ್, ಮುಖ್ಯಅತಿಥಿಗಳಾಗಿ, ಪಂಡಿತ್ ಸುಹಾಶಿತ್ ರಾಜ್, ಆರ್‌ಜೆ ರಾಹತ್ ಜಫ್ರೀ ತೀರ್ಪುಗಾರರಾಗಿದ್ದರು.