ಹೊಸ ಶುಲ್ಕ ಪಾವತಿಸದೆ ಸಾಮೂಹಿಕ ಪ್ರತಿಭಟನೆ: ಹೋರಾಟ ಸಮಿತಿ ಕರೆ
ಅವಳಿ ಜಿಲ್ಲೆಯಲ್ಲಿ ಟೋಲ್‌ಗೇಟ್‌ನಿಂದ ಸರ್ವಾಧಿಕಾರ; ಆರೋಪ
ಮಂಗಳೂರು, ನ.27: ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸರ್ವಿಸ್ ರಸ್ತೆ, ಮೇಲ್ಸೇತುವೆ, ನದಿಗಳ ಮೇಲಿನ ಸೇತುವೆಗಳ ಸಹಿತ ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳನ್ನು ಬಗೆ ಹರಿಸಲು ಹೆದ್ದಾರಿ ಪ್ರಾಧಿಕಾರ ಪೂರ್ಣ ವೈಫಲ್ಯ ಕಂಡಿದ್ದು, ಇದರ ವಿರುದ್ಧ ಸುರತ್ಕಲ್ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ಹೋರಾಟಕ್ಕೆ ಕರೆ ನೀಡಿದೆ.
ತಲಪಾಡಿಯಿಂದ ಸಾಸ್ತಾನದವರೆಗೆ ಟೋಲ್‌ಗೇಟ್‌ಗಳು ಸ್ಥಳೀಯರ ಎಲ್ಲ ರಿಯಾಯಿತಿಗಳನ್ನು ರದ್ದುಗೊಳಿಸಿವೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆಯ ಬೆಂಬಲದೊಂದಿಗೆ ಬಲವಂತದ ವಸೂಲಿಗೆ ಮುಂದಾಗಿರುವುದನ್ನು ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ಸುರತ್ಕಲ್ ತೀವ್ರವಾಗಿ ಖಂಡಿಸಿದೆ.
ಟೋಲ್‌ಗೇಟ್‌ನಿಂದಾಗಿ ಅವಳಿ ಜಿಲ್ಲೆಗಳ ಹೆದ್ದಾರಿಗಳಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಅಕ್ರಮ ಲೂಟಿಯ ಮೂಲಕ ಗುತ್ತಿಗೆದಾರರ ಸರ್ವಾಧಿಕಾರಕ್ಕೆ ಎಡೆ ಮಾಡಿಕೊಟ್ಟಿದೆ. ಆರಂಭದಲ್ಲಿ ಸ್ಥಳೀಯ ವಾಹನಗಳಿಗೆ ರಿಯಾಯಿತಿ ನೀಡಿ ಜನತೆಯ ವಿರೋಧವನ್ನು ತಣಿಸಲಾಗಿತ್ತು. ಹೆದ್ದಾರಿ ಕಾಮಗಾರಿಗಳು ಪೂರ್ಣಗೊಳಿಸದೆ ಟೋಲ್ ಸಂಗ್ರಹ ಆರಂಭಿಸಲಾಗಿತ್ತು. ಈಗ ಎಲ್ಲ ರಿಯಾಯಿತಿಗಳನ್ನು ರದ್ದುಗೊಳಿಸಿ ಗುತ್ತಿಗೆ ಕಂಪೆನಿ, ಪ್ರಾಧಿಕಾರ ಮಾತು ತಪ್ಪಿರುವುದಕ್ಕೆ ಹೋರಾಟ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ.
ಟೋಲ್‌ಗೇಟ್‌ನಲ್ಲಿ ರಿಯಾಯಿತಿ ರದ್ದುಗೊಳಿಸಿರುವುದರ ವಿರುದ್ಧ ಪ್ರತಿಭಟಿಸುವವರನ್ನು ಜಿಲ್ಲಾಡಳಿತ, ಪೊಲೀಸ್ ಇಲಾಖೆಯ ಮೂಲಕ ಬೆದರಿಸುವ, ಹತ್ತಿಕ್ಕುವ ಯತ್ನ ನಡೆಸುತ್ತಿದೆ. ಇದರಿಂದ ನಿಯಮಗಳ ಪಾಲನೆ, ಪ್ರಯಾಣಿಕರ ಸಮಸ್ಯೆಗಳನ್ನು ಕೇಳುವವರಿಲ್ಲದ ಸ್ಥಿತಿ ನಿರ್ಮಾಣವಾಗಿದೆ.
ಇಂತಹ ಅರಾಜಕ ಸ್ಥಿತಿಗೆ ಜನತೆಯ ಪರವಾಗಿ ನಿಲ್ಲದ, ಟೋಲ್ ಗುತ್ತಿಗೆದಾರರ ಪರ ವಹಿಸುವ ಸಂಸದರಾದ ನಳಿನ್‌ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ ಅವರ ನಿಲುವುಗಳೇ ಕಾರಣ ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಪ್ರಕಟನೆಯಲ್ಲಿ ಆರೋಪಿಸಿದ್ದಾರೆ.
‘ರಾ.ಹೆ. ಸಮಸ್ಯೆಗಳು ಕೇಂದ್ರ ಸರಕಾರದ ಸೃಷ್ಟಿ’
ಅವಳಿ ಜಿಲ್ಲೆಗಳಲ್ಲಿ ಹೆದ್ದಾರಿ ಸಮಸ್ಯೆ, ಬಲವಂತದ ಟೋಲ್ ಸಂಗ್ರಹದ ಸಮಸ್ಯೆ ಮಿತಿಮೀರಿದ್ದರೂ ಆಳುವ ಬಿಜೆಪಿಗೆ ಸೇರಿರುವ ಸಂಸದರು ಮೌನ ವಹಿಸಿದೆ. ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳು ಕೇಂದ್ರದ ಬಿಜೆಪಿ ಸರಕಾರದ ಸೃಷ್ಟಿಯಾಗಿದೆ ಎಂದು ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ಅದೇ ಪಕ್ಷದ ಸ್ಥಳೀಯ ಶಾಸಕರು ತಮ್ಮದೇ ಪಕ್ಷದ ಸರಕಾರದ ಮಟ್ಟದಲ್ಲಿ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವ ಬದಲು ಪ್ರತಿಭಟನಾಕಾರರ ಜೊತೆ ಕಾಣಿಸಿ ಕೊಳ್ಳುತ್ತಿರುವುದು ಜನತೆಯ ಗಮನ ಬೇರೆಡೆಗೆ ಸೆಳೆಯುವ ತಂತ್ರವಾಗಿದೆ. ಯಾವುದೇ ಕಾರಣಕ್ಕೂ ಟೋಲ್ ಗುತ್ತಿಗೆದಾರರ, ಹೆದ್ದಾರಿ ಪ್ರಾಧಿಕಾರ, ಜಿಲ್ಲಾಡಳಿತದ ಬೆದರಿಕೆ ಗಳಿಗೆ ಜನತೆ ಹಿಂಜರಿಯಬಾರದು. ಹೊಸ ಶುಲ್ಕವನ್ನು ಪಾವತಿಸದೆ ಸಾಮೂಹಿಕ ಪ್ರತಿಭಟನೆಯನ್ನು ಆರಂಭಿಸಬೇಕು ಎಂದು ಅವರು ಮನವಿ ಮಾಡಿದರು.







