ಎಚ್‌ಐವಿ ಕುರಿತು ಜಾಗೃತಿ ಮೂಡಿಸಿ: ವಿದ್ಯಾಕುಮಾರಿ

ಉಡುಪಿ, ನ.27: ಎಚ್‌ಐವಿ,ಏಡ್ಸ್ ಕುರಿತು ಶಾಲಾ ಕಾಲೇಜು ವಿದ್ಯಾರ್ಥಿ ಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹೆಚ್ಚೆಚ್ಚು ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ತಿಳಿಸಿದ್ದಾರೆ.
ಮಂಗಳವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ವಿಶ್ವ ಏಡ್ಸ್ ದಿನಾಚರಣೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಹಲವು ಮಂದಿ ತಮಗೆ ಅರಿವಿಲ್ಲದೆ ಎಚ್‌ಐವಿ ರೋಗಕ್ಕೆ ತುತ್ತಾಗುತ್ತಾರೆ. ಎಚ್‌ಐವಿ ರೋಗಿಯನ್ನು ಬೇರೆ ದೃಷ್ಠಿಯಿಂದ ನೋಡದೇ, ಸಾಮಾನ್ಯ ರೋಗಿ ಯಂತೆಯೇ ಕಾಣಬೇಕು. ಎಚ್‌ಐವಿ- ಏಡ್ಸ್ ಕುರಿತಂತೆ ಜಿಲ್ಲೆಯ ಎಲ್ಲಾ ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಅಪರ ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲೆಯಲ್ಲಿ ಡಿ.1ರಂದು ಬ್ರಹ್ಮಾವರದ ಎಸ್‌ಎಂಎಸ್ ಪದವಿ ಪೂರ್ವ ಕಾಲೇಜಿನಲ್ಲಿ ‘ನಿಮ್ಮ ಎಚ್‌ಐವಿ’ ಸ್ಥಿತಿಯನ್ನು ತಿಳಿಯಿರಿ’ ಎಂಬ ಘೋಷವಾಕ್ಯ ದೊಂದಿಗೆ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮ ಆಚರಿಸುವಂತೆ ತಿಳಿಸಿದ ಅಪರ ಜಿಲ್ಲಾಧಿಕಾರಿಗಳು, ವಿಶ್ವ ಏಡ್ಸ್ ದಿನ ಪ್ರಯುಕ್ತ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಬೃಹತ್ ಜಾಥಾ ಮತ್ತು ಜನಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಡಿಹೆಚ್‌ಒ ಡಾ. ರೋಹಿಣಿ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಚಿದಾನಂದ ಸಂಜು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.