ಉಡುಪಿಯಲ್ಲಿ ಸಂವಿಧಾನ ದಿನಾಚರಣೆ

ಉಡುಪಿ, ನ.27: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಉಡುಪಿ ಹಾಗೂ ಕಲ್ಯಾಣಪುರ ಸಂತೆಕಟ್ಟೆಯ ಬೆಲ್ ಓ ಸೀಲ್ ವಾಲ್ವ್ಸ್‌ನ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ವೆಂಕಟೇಶ ನಾಯ್ಕಾ ಟಿ. ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿ ಕಾನೂನು ಅತ್ಯವಶ್ಯಕ ವಾಗಿದೆ. ಕಾನೂನಿನ ತಿಳುವಳಿಕೆ ಮತ್ತು ಪಾಲನೆ ನ್ಯಾಯಾಲಯಗಳಿಗಷ್ಟೇ ಸೀಮಿತವಾಗದೆ ಅದು ಎಲ್ಲರ ಜವಾಬ್ದಾರಿ ಯಾಗಬೇಕು ಎಂದರು.
ದೇಶದ ಸಂವಿಧಾನದ ಅಡಿಯಲ್ಲಿ ಕಾನೂನುಗಳು ರಚನೆಯಾಗಿವೆ. ಕಾನೂನು ಉಲ್ಲಂಘನೆ ಮಾಡಿದವರನ್ನು ಶಿಕ್ಷಿಸುವುದಕ್ಕೂ ಅದರಲ್ಲಿ ಅವಕಾಶ ನೀಡಲಾಗಿದೆ. ಮಾನವನ ಬದುಕಿನ ದಾರಿಯಲ್ಲಿ ನೀತಿಯುತ ಬದುಕಿಗಿಂತ ದೊಡ್ಡದು ಯಾವುದೂ ಇಲ್ಲ. ಬೆಳೆಯುವ ಎಳೆಯರು ಉತ್ತಮ ಜೀವನ ವೌಲ್ಯಗಳನ್ನು ರೂಢಿಸಿಕೊಳ್ಳಬೇಕು ಎಂದರು.
ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಲತಾ, ವಕೀಲರ ಸಂಘದ ಅಧ್ಯಕ್ಷ ಹೆಚ್. ರತ್ನಾಕರ ಶೆಟ್ಟಿ, ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ, ಬೆಲ್ ಓ ಸೀಲ್ ಸಂಸ್ಥೆಯ ಆಡಳಿತ ನಿರ್ದೇಶಕ ರಾಜೇಶ್ ಕೆ. ಸ್ಯಾಲಿನ್ಸ್, ಕಾನೂನು ಸಲಹೆಗಾರ ಬಿ.ಕೆ.ನಾರಾಯಣ ಉಪಸ್ಥಿತರಿದ್ದರು.
ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎನ್. ನಿತ್ಯಾನಂದ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಉಪನ್ಯಾಸ ನೀಡಿದರು. ಅಧ್ಯಕ್ಷತೆಯನ್ನು ಗಿಲ್ಬರ್ಟ್ ಸ್ಯಾಲಿನ್ಸ್ ವಹಿಸಿದ್ದರು. ಸ್ವಪ್ನ ಸ್ಯಾಲಿನ್ಸ್ ಕಾರ್ಯಕ್ರಮ ನಿರೂಪಿಸಿದರು.







