ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ವಾಯತ್ತತೆ ನೀಡಲು ಎಲ್.ಹನುಮಂತಯ್ಯ ಆಗ್ರಹ

ಬೆಂಗಳೂರು, ನ.27: ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ವಾಯತ್ತತೆ ನೀಡಬೇಕು ಎಂದು ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರಕಾರವನ್ನು ಒತ್ತಾಯಿಸುತ್ತೇನೆ ಎಂದು ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಇಂದಿಲ್ಲಿ ಹೇಳಿದ್ದಾರೆ. ಮಂಗಳವಾರ ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕನ್ನಡ ಗೆಳೆಯರ ಬಳಗದಿಂದ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ, ಸಾಧಕರಿಗೆ ಅಭಿನಂದನೆ ಹಾಗೂ ಕಾರ್ಯಕರ್ತರಿಗೆ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ತಮಿಳು ಭಾಷೆಗೆ ಕೇಂದ್ರ ಸರಕಾರ ಸ್ವಾಯತ್ತತೆ ನೀಡಿದೆ. ಹೀಗಾಗಿ, ಅವರು ವಾರ್ಷಿಕವಾಗಿ ಕೋಟ್ಯಂತರ ಹಣ ಪಡೆದು, ಭಾಷೆಯ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಕನ್ನಡಕ್ಕೆ ಸ್ವಾಯತ್ತತೆ ನೀಡಲು ಕೇಂದ್ರ ಸರಕಾರ ಹಿಂದೇಟು ಹಾಕುತ್ತಿದೆ. ತಮಿಳುನಾಡು ವಾರ್ಷಿಕ 10-15 ಕೋಟಿ ಹಣ ಪಡೆಯುತ್ತಿದ್ದರೆ, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳು ಕೇವಲ 1-2 ಕೋಟಿ ರೂ.ಹಣ ಪಡೆಯುತ್ತಿದ್ದು, ಅದರಲ್ಲಿಯೂ 1 ಕೋಟಿ ವಾಪಸ್ಸು ಕಳಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದರ.
ನಾನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಕೇಂದ್ರಕ್ಕೆ ತಂಡವೊಂದನ್ನು ಕರೆದುಕೊಂಡು ಹೋಗಿ ಶಾಸ್ತ್ರೀಯ ಸ್ಥಾನಮಾನ ನೀಡಬೇಕು ಎಂದು ಹಲವು ಪ್ರಯತ್ನಗಳನ್ನು ಮಾಡಿದ್ದೆವು. ಅಲ್ಲದೆ, ತಮಿಳುನಾಡಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿ ಬಗ್ಗೆ ವರದಿ ಸಲ್ಲಿಸಿದ್ದೆವು. ಆದರೆ, ಅದನ್ನು ದಡ ಸೇರಿಸಲು ಸಾಧ್ಯವಾಗಲಿಲ್ಲ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಸಿಕ್ಕಾಗ, ನಾವು ಬೆಂಗಳೂರು ವಿವಿಯಲ್ಲಿ ಮೂರು ಎಕರೆ ಜಾಗದಲ್ಲಿ ಕಟ್ಟಡ ಕಟ್ಟಲು ಅವಕಾಶ ಕೊಡಿಸಿದ್ದೆವು. ಇದಕ್ಕೆ ಮೈಸೂರಿನ ಕೆಲವರು ವಿರೋಧ ಮಾಡಿ ಮೈಸೂರಿನಲ್ಲಿಯೇ ಮಾಡಬೇಕು ಎಂದರು. ಇದರಿಂದಾಗಿ ಹಲವು ಗೊಂದಲಗಳ ನಡುವೆಯೇ ಶಾಸ್ತ್ರೀಯ ಸ್ಥಾನಮಾನ ಸಿಕ್ಕರೂ, ಅದಕ್ಕೆ ಸ್ವಾಯತ್ತತೆ ಸಿಗಲು ಸಾಧ್ಯವಾಗಲಿಲ್ಲ ಎಂದು ನುಡಿದರು.
ಸ್ಥಳೀಯ ಭಾಷಿಕರಿಗೆ ಅವಕಾಶ ಸಿಗಲಿ: ಸರಕಾರಿ ಉದ್ಯೋಗಗಳಲ್ಲಿ ಸ್ಥಳೀಯ ಭಾಷಿಕರಿಗೆ ಹೆಚ್ಚಿನ ಆದ್ಯತೆ ಸಿಗಬೇಕು ಎಂದು ಹಿಂದಿನ ಅಧಿವೇಶನದಲ್ಲಿ ನಾನು ಪ್ರಶ್ನೆ ಮಾಡಿದ್ದೆ. ಅದಕ್ಕೆ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಧ್ವನಿಗೂಡಿಸಿದ್ದರು. ಆದರೆ, ಅದಕ್ಕೆ ಕೇಂದ್ರ ಸರಕಾರ ಸರಿಯಾಗಿ ಸ್ಪಂದಿಸಲಿಲ್ಲ. ಹೀಗಾಗಿ, ಮುಂದಿನ ಅಧಿವೇಶನದಲ್ಲಿ ಈ ವಿಚಾರವನ್ನೂ ಪ್ರಸ್ತಾಪ ಮಾಡಿ, ಕೇಂದ್ರದ ಗಮನ ಸೆಳೆಯುವ ಪ್ರಯತ್ನ ಮಾಡುತ್ತೇನೆ ಎಂದು ಹನುಮಂತಯ್ಯ ತಿಳಿಸಿದರು.
ನೂತನ ತಂತ್ರಜ್ಞಾನವನ್ನು ಅಭಿವೃದ್ಧಿ ಮಾಡುವ ಸಂದರ್ಭದಲ್ಲಿ ಸರಕಾರಗಳಿಗೆ ವಿವೇಕ ಇರಬೇಕು. ಕಲಾವಿದರಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ, ಆನ್‌ಲೈನ್‌ನಲ್ಲಿ ಹಣ ಕಳಿಸುತ್ತೇವೆ ಎನ್ನುತ್ತಾರೆ. ಆದರೆ, ಹಲವಾರು ಜನರು ಬಡ ಕುಟುಂಬದಿಂದ, ಗ್ರಾಮೀಣ ಪ್ರದೇಶದಿಂದ ಬಂದವರಿರುತ್ತಾರೆ. ಈ ಸಂದರ್ಭದಲ್ಲಿ ಅವರಿಗೆ ಈ ಅಂತರ್ಜಾಲ ಸಂಪರ್ಕ ಸಾಧಿಸಲು ಸಾಧ್ಯವಾಗುವುದಿಲ್ಲ. ಅವರನ್ನೂ ಗಮನದಲ್ಲಿಟ್ಟುಕೊಂಡು ತಂತ್ರಜ್ಞಾನವನ್ನು ಅಳವಡಿಸಬೇಕು ಎಂದು ಕೋರಿದರು.
ಕಾರ್ಖಾನೆಗಳು ಉಳಿಯಬೇಕು: ರಾಜ್ಯದಲ್ಲಿರುವ ಬಹುತೇಕ ಕಾರ್ಖಾನೆಗಳಲ್ಲಿ ಕಾರ್ಮಿಕರ ಸಂಖ್ಯೆ ತೀರ ಕಡಿಮೆ ಪ್ರಮಾಣದಲ್ಲಿದೆ. ಹಿಂದೆ ಇದ್ದ ಎಚ್‌ಎಂಟಿ, ಎನ್‌ಜಿಇಎಫ್, ಎಂಎಎನ್ ಸೇರಿದಂತೆ ಹಲವು ಕಾರ್ಖಾನೆಗಳಿಂದು ಮುಚ್ಚಿವೆ. ಎಚ್‌ಎಂಟಿ ಮುಚ್ಚಲು ನಮ್ಮವರೇ ಕಾರಣಕರ್ತರಾಗಿದ್ದಾರೆ. ಹೀಗಾಗಿ, ಕಾರ್ಮಿಕರು ಎಲ್ಲ ಸೇರಿ ಕಾರ್ಖಾನೆಗಳನ್ನು ಉಳಿಸುವ ಪ್ರಯತ್ನ ಮಾಡಬೇಕು ಹಾಗೂ ಕಾರ್ಮಿಕ ಸಂಘಟನೆಗಳು ಪ್ರತಿನಿತ್ಯ ಆಡಳಿತ ಮಂಡಳಿಯನ್ನು ಎಚ್ಚರಿಸುವಂತಾಗಬೇಕು ಎಂದರು.
ಹಿರಿಯ ಸಂಶೋಧಕ ಚಿದಾನಂದಮೂರ್ತಿ ಮಾತನಾಡಿ, ಕನ್ನಡ ನಾಡಿನವರು ಮಾತನಾಡಿದ್ದನ್ನು ಅರಿತು ಆಚರಣೆ ಮಾಡುತ್ತಾರೆ. ನಿಜವಾದ ಚಿನ್ನ ಎಂದರೆ ಇನ್ನೊಬ್ಬರ ವಿಚಾರ, ಧರ್ಮವನ್ನು ಗೌರವಿಸುವುದಾಗಿದೆ. ಹೀಗಾಗಿ, ಕನ್ನಡಿಗರು ಎಂದಿಗೂ, ಎಲ್ಲ ಕಡೆಯೂ ಪ್ರಸ್ತುತವಾಗಿರುತ್ತಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪಾಲನೇತ್ರಗೆ ‘ಕನ್ನಡ ಚಿರಂಜೀವಿ’ ಪ್ರಶಸ್ತಿ ಹಾಗೂ ಕೆ.ಎಸ್.ನಾಗರಾಜ್‌ಗೆ ‘ಕನ್ನಡ ಅರವಿಂದ’ ಪ್ರಶಸ್ತಿ ನೀಡಲಾಯಿತು. ಹಾಗೂ ಎಂ.ಗೌಡಯ್ಯ, ಬಿ.ಎಂ.ಗಂಗಣ್ಣ, ಜಯರಾಮ ಕೆ.ಯಾದವ, ಮೊಹಮದ್ ಮುನಾಫ್, ಶಾಮ್ ಪ್ರಸಾದ್, ಸುರೇಶ್ ಕುಮಾರ್ ಸೇರಿದಂತೆ ಹಲವರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ಸಮಾರಂಭದಲ್ಲಿ ಸಾಹಿತಿ ಪ್ರೊ.ಎಂ.ಎಚ್.ಕೃಷ್ಣಯ್ಯ, ನಿವೃತ್ತ ಪ್ರಾಧ್ಯಾಪಕ ಡಾ.ಆರ್.ಕೃಷ್ಣಶಾಸ್ತ್ರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕಾಯ್ದೆ ಜಾರಿಯಾಗಲಿ
ಸರಕಾರಿ ನೌಕರರು, ಜನಪ್ರತಿನಿಧಿಗಳ ಮಕ್ಕಳು ಕಡ್ಡಾಯವಾಗಿ ಸರಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಬೇಕು ಎಂದು ಸರಕಾರ ಕಾಯ್ದೆಯನ್ನು ಜಾರಿ ಮಾಡಿದರೆ ಕನ್ನಡ ಶಾಲೆಗಳನ್ನು ಉಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ಸರಕಾರ ಗಂಭೀರವಾದ ಚಿಂತನೆ ನಡೆಸಬೇಕು.
-ಡಾ.ಎಲ್, ಹನುಮಂತಯ್ಯ, ರಾಜ್ಯಸಭಾ ಸದಸ್ಯ







