ಆಹಾರ ಸರಬರಾಜು ಭತ್ತೆ ಕಡಿ: ಝೊಮಾಟೊ ಸಂಸ್ಥೆಯ ವಿರುದ್ಧ ಡೆಲಿವರಿ ಬಾಯ್‌ಗಳ ಪ್ರತಿಭಟನೆ
ಬೆಂಗಳೂರು, ನ.27: ಆಹಾರ ಸರಬರಾಜು ಭತ್ತೆಯನ್ನು ಏಕಾಏಕಿ ಕಡಿತಗೊಳಿಸಿರುವ ಝೊಮಾಟೊ ಆನ್‌ಲೈನ್ ಮಾರಾಟ ಸಂಸ್ಥೆಯ ವಿರುದ್ಧ ನೂರಾರು ಡೆಲಿವರಿ ಬಾಯ್‌ಗಳು ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳವಾರ ನಗರದ ನಾಗವಾರ ವೃತ್ತದ ಬಳಿಯ ದಿ ಗ್ಲೋಬಲ್ ಶಾಲೆಯ ಮೈದಾನದಲ್ಲಿ ನಾಗವಾರ, ಆರ್.ಟಿ.ನಗರ, ಯಲಹಂಕ ಸೇರಿದಂತೆ ಇನ್ನಿತರೆಡೆ ಕೆಲಸ ಮಾಡುವ ಡೆಲಿವರಿ ಬಾಯ್‌ಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡು, ನಮಗೆ ಮೊದಲು ನಿಗದಿಪಡಿಸಿದಂತೆಯೇ ಪ್ರತಿ ಆರ್ಡರ್‌ಗೆ 40 ರೂ. ನೀಡಬೇಕೆಂದು ಒತ್ತಾಯಿಸಿದರು.
ನ. 26ರಿಂದ ಪ್ರತಿ ಆರ್ಡರ್‌ಗೆ 40ರೂನಿಂದ 30 ರೂ.ಗೆ ಇಳಿಸಿದ್ದಾರೆ. ನಿರಂತರವಾದ ವಾಹನ ದಟ್ಟಣೆಯ ನಡುವೆ ಕೆಲಸ ಮಾಡುತ್ತಿರುವ ನಮಗೆ ಅನ್ಯಾಯ ಮಾಡುವುದು ಎಷ್ಟು ಸರಿ. ಪ್ರತಿನಿತ್ಯ 10ರಿಂದ 15 ಆರ್ಡರ್ ನೀಡಲಾಗುತ್ತದೆ. ದಿನಕ್ಕೆ 13ರಿಂದ 15 ಗಂಟೆಗಳ ಕಾಲ ಕೆಲಸ ಮಾಡಿದರು 1 ಸಾವಿರ ರೂ. ಸಂಪಾದಿಸುವುದು ಕಷ್ಟವಿದೆ. ಹೀಗಾಗಿ, ಕೆಲವರು ಹಗಲು ರಾತ್ರಿ ಎನ್ನದೆ ಕೆಲಸ ಮಾಡುತ್ತಾರೆ. ಪರಿಸ್ಥಿತಿ ಹೀಗಿರುವಾಗ ಏಕಾಏಕಿ 10 ರೂ. ಕಡಿತಗೊಳಿಸಿದರೆ ಕಷ್ಟವಾಗುತ್ತದೆ ಎಂದು ಅಳಲು ತೋಡಿಕೊಂಡರು.
ಒಂದು ಆರ್ಡರ್‌ಗೆ ತೆರಳಿ ಆಹಾರ ಸರಬರಾಜು ಮಾಡಿದರೆ ನಮಗೆ ಕನಿಷ್ಠ 12ರಿಂದ 18 ರೂ. ಪೆಟ್ರೊಲ್ ವೆಚ್ಚ ತಗಲುತ್ತದೆ. ನಾವು ದುಡಿಯುವುದರಲ್ಲಿ ಅರ್ಧ ಭಾಗವನ್ನು ವಾಹನದ ಇಂಧನಕ್ಕಾಗಿಯೇ ವಿನಿಯೋಗಿಸಬೇಕಾಗುತ್ತದೆ. ಹೀಗಾಗಿ, ಹಿಂದೆ ನೀಡುತ್ತಿದ್ದ 40 ರೂ.ನಂತೆಯೇ ಭತ್ತೆಯನ್ನು ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
40 ರೂ. ನೀಡಬೇಕಾದರೆ ಗ್ರಾಹಕರು 5 ಸ್ಟಾರ್ ರೇಟಿಂಗ್ ನೀಡಬೇಕೆಂಬ ಹೊಸ ನಿಯಮವನ್ನು ಕಂಪನಿ ಜಾರಿ ಮಾಡಿದೆ. ಆದರೆ, ಆಹಾರ ಸರಬರಾಜು ಮಾಡಲು ಹೋದಾಗ ಕೆಲವೊಮ್ಮ ಗ್ರಾಹಕರು ಫೈವ್ ಸ್ಟಾರ್ ರೇಟಿಂಗ್ ಕೊಡುವುದಿರಲಿ ಮಾತನಾಡಲು ಅಸಡ್ಡೆ ತೋರುತ್ತಾರೆ ಎಂದು ತಮ್ಮ ಅಸಹಾಯಕತೆ ತೋಡಿಕೊಂಡರು. ಹೀಗಾಗಿ ಝೊಮಾಟೊ ಕಂಪೆನಿ ತನ್ನ ವಿಶ್ವಾಸವನ್ನು ಉಳಿಸಿಕೊಳ್ಳಬೇಕೆಂದು ಡೆಲಿವರಿ ಬಾಯ್‌ಗಳು ಮನವಿ ಮಾಡಿದರು.







