ನ.28ರಂದು ‘ಸಂವಿಧಾನ ರಕ್ಷಿಸಿ ಭಾರತ ಉಳಿಸಿ’ ಅಭಿಯಾನ
ಬೆಂಗಳೂರು, ನ.27: ರಾಷ್ಟ್ರ ಸೇವಾದಳ ವತಿಯಿಂದ ‘ಸಂವಿಧಾನ ರಕ್ಷಿಸಿ ಭಾರತ ಉಳಿಸಿ’ ಅಭಿಯಾನವನ್ನು ನ.28ರಂದು ಧಾರವಾಡದ ಕನ್ನಡ ಸಾಹಿತ್ಯ ಪರಿಷತ್ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಷ್ಟ್ರ ಸೇವಾದಳದ ರಾಷ್ಟ್ರಾಧ್ಯಕ್ಷ ಸುರೇಶ್ ಖೈರನಾರ್, ಸಂವಿಧಾನ ರಕ್ಷಿಸಿ ಭಾರತ ಉಳಿಸಿ ಅಭಿಯಾನ ಒಂದು ದಿನಕ್ಕೆ ಸೀಮಿತವಾಗದೆ ನಿರಂತರವಾಗಿ ನಡೆಸಲಾಗುವುದು. ಈಗಾಗಲೇ ಮುಂಬೈ, ಪುಣೆ, ಕೊಲ್ಕತ್ತಾದಲ್ಲಿ ಅಭಿಯಾನ ಆರಂಭಿಸಲಾಗಿದ್ದು, ನ. 26ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ಕೇಂದ್ರ ಸರಕಾರದ ಕೆಲ ಸಚಿವರು ಸಂವಿಧಾನ ಬದಲಾವಣೆಯ ಬಗ್ಗೆ ಅಪಸ್ವರ ಎತ್ತುತ್ತಿದ್ದಾರೆ. ಕಾಣದ ಕೈಗಳು ಷಡ್ಯಂತ್ರ್ಯ ರೂಪಿಸುತ್ತಿದ್ದು, ಇದರಿಂದಾಗಿ ಭಾರತದ ಸಂವಿಧಾನ ಅಳಿವಿನಂಚಿನಲ್ಲಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ, ಸಮಾನತೆ, ಸೋದರತೆಗೆ ಕುತ್ತು ಬಂದಿದ್ದು, ಅಭಿಯಾನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದೇವೆ ಎಂದು ಹೇಳಿದರು.
28ರಂದು ಧಾರವಾಡದಲ್ಲಿ ಅಭಿಯಾನ ನಡೆಯಲಿದ್ದು, ಮುಂಬರುವ ದಿನಗಳಲ್ಲಿ ಬೆಳಗಾವಿ, ಬಾಗಲಕೋಟೆ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಡೆಸಲಾಗುವುದು. ಧಾರವಾಡದ ಅಭಿಯಾನಕ್ಕೆ ಸಮಾಜ ಪರಿವರ್ತನಾ ಸಂಘಟನೆಯ ಎಸ್.ಆರ್.ಹಿರೇಮಠ ಅವರು ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ರಾಷ್ಟ್ರ ಸೇವಾದಳದ ರಾಜ್ಯಾಧ್ಯಕ್ಷ ಅಲಿಬಾಬಾ, ಮಾಜಿ ಶಾಸಕ ಎನ್.ಎಸ್. ಖೇಡರ್ ಇದ್ದರು.







