ಗಾಂಧೀಜಿ, ಸರ್ದಾರ್ ಪಟೇಲರ ತಂದೆಯ ಹೆಸರೇನು: ಅರುಣ್ ಜೇಟ್ಲಿ

ಹೊಸದಿಲ್ಲಿ, ನ. 27: ಕಾಂಗ್ರೆಸ್ ನಾಯಕರೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರ ತಂದೆ ಬಗ್ಗೆ ಟೀಕಿಸಿದ ಹಿನ್ನೆಲೆಯಲ್ಲಿ ಮಂಗಳವಾರ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ಭಾಣಗಳ ಮಳೆ ಸುರಿಸಿರುವ ಕೇಂದ್ರ ಸಚಿವ ಅರುಣ್ ಜೇಟ್ಲಿ, ಕಾಂಗ್ರೆಸ್ ಶ್ರೇಷ್ಟ ಕುಲ ನಾಮಗಳನ್ನು ಮಾತ್ರ ರಾಜಕೀಯ ಬ್ರಾಂಡ್ ಆಗಿ ಪರಿಗಣಿಸುತ್ತದೆ ಎಂದಿದ್ದಾರೆ.
ವಿಧಾನ ಸಭೆ ಚುನಾವಣೆ ನಡೆಯಲಿರುವ ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರದ ಸಂದರ್ಭ ಕಾಂಗ್ರೆಸ್ ನಾಯಕ ವಿಲಾಸ್‌ರಾವ್ ಮುಟ್ಟೆಮ್ವಾರ್, ರಾಹುಲ್ ಗಾಂಧಿ ಅವರ ಹೆತ್ತವರು ಯಾರು ಎಂದು ಜಗತ್ತಿಗೆ ಗೊತ್ತಿದೆ. ಆದರೆ, ಪ್ರಧಾನಿ ಮೋದಿ ಅವರ ತಂದೆ ಯಾರು ಎಂದು ಯಾರಿಗೂ ಗೊತ್ತಿಲ್ಲ ಎಂದು ಹೇಳಿದ್ದರು. ಅವರ ಹೇಳಿಕೆಯನ್ನು ಉಲ್ಲೇಖಿಸಿ ಅರುಣ್ ಜೇಟ್ಲಿ ಈ ಹೇಳಿಕೆ ನೀಡಿದ್ದಾರೆ.
ಫೇಸ್‌ಬುಕ್ ಪೋಸ್ಟ್‌ನಲ್ಲಿ ಜೇಟ್ಲಿ, ಕಾಂಗ್ರೆಸ್‌ನ ನಾಯಕತ್ವ ಪರೀಕ್ಷೆಯಿಂದಾಗಿ ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದ ಲಕ್ಷಾಂತರ ಪ್ರತಿಭಾವಂತ ರಾಜಕೀಯ ಕಾರ್ಯಕರ್ತರು ವಿಫಲರಾಗಿದ್ದಾರೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದ ಸ್ವಾರ್ಥವು ಭಾರತ ಅನುವಂಶೀಯ ಪ್ರಜಾಪ್ರಭುತ್ವಕ್ಕೆ ಒಳಪಡಬೇಕೇ ಎಂಬ ಬಗ್ಗೆ ಚರ್ಚೆ ಹುಟ್ಟು ಹಾಕಿದೆ. ಚುನಾವಣಾ ಚರ್ಚೆಗೆ ಪ್ರಧಾನ ಮಂತ್ರಿ ಅವರ ತಾಯಿಯ ಪ್ರಾಯ ವಿಷಯವಾಗಿದೆ. ಮೋದಿ ಅವರ ತಂದೆಯ ಅನಾಮಧೇಯತೆಯನ್ನು ಅಸಮರ್ಪಕ ಪೂರ್ವಾಪರ ಎಂದು ಬಣ್ಣಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
“ನೀವು ಉತ್ತಮ ಕುಟುಂಬದ ಪರಂಪರೆಯನ್ನು ಪ್ರತಿನಿಧಿಸುತ್ತಿದ್ದರೆ, ನಿಮಗೆ ರಾಜಕೀಯದಲ್ಲಿ ಅವಕಾಶ ಇದೆ ಎಂಬ ವಾದವನ್ನು ಇದು ಮುಂದಿಟ್ಟಿದೆ. ಸಾಮಾನ್ಯ ಕುಟುಂಬದಿಂದ ಬಂದ ಲಕ್ಷಾಂತರ ಪ್ರತಿಭಾನ್ವಿತ ರಾಜಕೀಯ ಕಾರ್ಯಕರ್ತರು ಕಾಂಗ್ರೆಸ್‌ನ ನಾಯಕತ್ವ ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆ. ಸ್ಫೂರ್ತಿ ನೀಡಲು ಹಾಗೂ ನಾಯಕತ್ವ ವಹಿಸಲು ಮೆರಿಟ್, ಪ್ರತಿಭೆ, ಸಾಮರ್ಥ್ಯ ಇಲ್ಲಿ ಮುಖ್ಯವಲ್ಲ. ಕಾಂಗ್ರೆಸ್ ಶ್ರೇಷ್ಠ ಕುಲನಾಮವನ್ನು ರಾಜಕೀಯ ಬ್ರಾಂಡ್ ಆಗಿ ಪರಿಗಣಿಸುತ್ತದೆ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳಲು ಬಯಸುತ್ತೇನೆ. ಗಾಂಧೀಜಿ ಅವರ ತಂದೆ ಹೆಸರೇನು ?”, ಸರ್ದಾರ್ ಪಟೇಲ್ ಅವರ ತಂದೆಯ ಹೆಸರೇನು ? ಸರ್ದಾರ್ ಪಟೇಲ್ ಅವರ ಪತ್ನಿಯ ಹೆಸರೇನು ? ಎಂದು ಜೇಟ್ಲಿ ಪ್ರಶ್ನಿಸಿದ್ದಾರೆ.







