ಬೆಂಗಳೂರು: ಡಿ.10ರಿಂದ ವಿಶ್ವ ಬುದ್ಧಿಮಾಂದ್ಯರ ಸಮಾವೇಶ
ಬೆಂಗಳೂರು, ನ.27: ಆಶಾ, ಸೃಷ್ಟಿ ಸ್ಪೆಷಲ್ ಅಕಾಡೆಮಿ, ಕರ್ನಾಟಕ ಪೇರೆಂಟ್ಸ್ ಅಸೋಸಿಯೇಷನ್ ಸೇರಿದಂತೆ 12 ಎನ್‌ಜಿಒಗಳು ಸೇರಿ ಡಿ.10ರಿಂದ ಮೂರು ದಿನಗಳವರೆಗೆ ಕೋರಮಂಗಲದ ಸೇಂಟ್ ಜಾನ್ಸ್ ನ್ಯಾಷನಲ್ ಅಕಾಡೆಮಿ ಸಭಾಂಗಣದಲ್ಲಿ ವಿಶ್ವ ಬುದ್ಧಿಮಾಂದ್ಯರ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೇಂಟ್ ಜಾನ್ಸ್ ಆಸ್ಪತ್ರೆಯ ವೈದ್ಯ ಅಶೋಕ್, ಸಮಾವೇಶದಲ್ಲಿ ಬುದ್ಧಿಮಾಂದ್ಯರ ವೈದ್ಯಕೀಯ ನಿರ್ವಹಣೆ, ಆರಂಭಿಕ ಶಿಕ್ಷಣ, ಶಾಲಾ ಶಿಕ್ಷಣ, ವೃತ್ತಿಪರ ಪುನರ್ ವಸತಿ, ಉದ್ಯೋಗ, ಕುಟುಂಬ ಸದಸ್ಯರಿಗೆ ಬೆಂಬಲ, ಸರಕಾರಿ ಕಾನೂನು ಹಾಗೂ ಯೋಜನೆಗಳು, ಪರ್ಯಾಯ ರೂಪಗಳ ಮಧ್ಯಸ್ಥಿಕೆ, ವಸತಿ ವ್ಯವಸ್ಥೆ ಮತ್ತು ಮಾದರಿಗಳು ಹಾಗೂ ಒಡಹುಟ್ಟಿದವರ ಒಳಗೊಳ್ಳುವಿಕೆಯ ಬಗ್ಗೆ ಅನುಭವ, ಜ್ಞಾನವನ್ನು ಹಚ್ಚಿಕೊಳ್ಳಲಾಗುವುದು ಎಂದರು.
ಆಟಿಸಮ್ (ಬುದ್ಧಿಮಾಂದ್ಯತೆ) ಲಕ್ಷಣಗಳು, ತಡೆಗಟ್ಟುವ ಕ್ರಮದ ಬಗ್ಗೆ ಅಂತರ್‌ರಾಷ್ಟ್ರೀಯ ಮಟ್ಟದ 16, ದೇಶದ 22 ತಜ್ಞರು ಉಪನ್ಯಾಸ ನೀಡಲಿದ್ದಾರೆ. ಈಗಾಗಲೇ 200ಕ್ಕೂ ಅಧಿಕ ಜನರು ನೋಂದಣಿ ಮಾಡಿಕೊಂಡಿದ್ದು, ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ: 99455 61733 ಅನ್ನು ಸಂಪರ್ಕಿಸಬಹುದು ಎಂದು ಹೇಳಿದರು.





