ಯಕ್ಷಗಾನದ ಚೌಕಟ್ಟಿನೊಳಗೆ ಹೊಸತನ ಅಳವಡಿಸಿ: ಅಶ್ವಿನಿ ಕೊಂಡದಕುಳಿ

ಉಡುಪಿ, ನ. 26: ಯಕ್ಷಗಾನ ಪರಿಪೂರ್ಣವಾದ ಕಲೆ. ಆದರೆ ಅದಕ್ಕೆ ಸಿಗ ಬೇಕಾದ ಸ್ಥಾನಮಾನ ಸರಿಯಾಗಿ ಸಿಕ್ಕಿಲ್ಲ. ಮೂಲ ಚೌಕಟ್ಟಿನೊಳಗೆ ಹೊಸತನ ವನ್ನು ಅಳವಡಿಸಿಕೊಂಡು ಜನರ ಮನಸ್ಸಿಗೆ ಮುಟ್ಟುವ ರೀತಿಯಲ್ಲಿ ಪ್ರದರ್ಶನ ಗಳನ್ನು ನೀಡಿದರೆ ಯಕ್ಷಗಾನವನ್ನು ಉಳಿಸಿ ಬೆಳೆಸಬಹುದಾಗಿದೆ ಎಂದು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಸದಸ್ಯೆ ಅಶ್ವಿನಿ ಕೊಂಡದಕುಳಿ ಹೇಳಿದ್ದಾರೆ.
ಪರ್ಯಾಯ ಪಲಿಮಾರು ಮಠ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಮಂಗಳ ವಾರ ರಾಜಾಂಗಣದಲ್ಲಿ ಆಯೋಜಿಸಲಾದ ಉಡುಪಿಯ ಯಕ್ಷೋತ್ಸಾಹಿ ಯಕ್ಷಗಾನ ಅಧ್ಯಯನ ಕೇಂದ್ರದ ವಾರ್ಷಿಕೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತಿದ್ದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್.ಸಾಮಗ ತಂಡದ ಲಾಂಛನ ಮತ್ತು ಅಂತ ರ್ಜಾಲ ಪುಟದ ಅನಾವರಣಗೊಳಿಸಿದರು. ಉದ್ಯಮಿ ರಂಜನ್ ಕಲ್ಕೂರ, ಡಾ.ಕೃಷ್ಣ ಮೋಹನ್ ಪ್ರಭು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಗಣೇಶ್ ಕೊಲೆಕಾಡಿಗೆ ‘ಯಕ್ಷ ವಿಭೂಷಣ’ ಹಾಗೂ ಕಿಶನ್ ಅಗ್ಗಿತ್ತಾಯಗೆ ‘ಯಕ್ಷೋತ್ಸಾಹಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ದಿ. ವಾಸುದೇವ ಪೈ ಸ್ಮರಣೆಯಲ್ಲಿ ನಡೆದ ಯಕ್ಷಗಾನ ಛಾಯಾಚಿತ್ರಗಳ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಂಸ್ಥೆಯ ಸಂಚಾಲಕ ಶ್ರೀನಿಧಿ ಆಚಾರ್ಯ ಸ್ವಾಗತಿಸಿದರು. ನಿತೀಶ್ ಮಾರ್ನಾಡ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ತಂಡದ ಸದಸ್ಯರಿಂದ ಸುದರ್ಶನ ವಿಜಯ ಯಕ್ಷಗಾನ ಪ್ರದರ್ಶನ ನಡೆಯಿತು.