ಓಮ್ನಿ ಕಾರು- ಬೈಕ್ ಢಿಕ್ಕಿ: ದಂಪತಿ ಮೃತ್ಯು

ಕಾರ್ಕಳ, ನ.27: ಓಮ್ನಿ ಕಾರೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ದಂಪತಿ ಮೃತಪಟ್ಟ ಘಟನೆ ಮುಡಾರು ಗ್ರಾಮದ ಪಕ್ಕಿ ಬೆಟ್ಟು ಎಂಬಲ್ಲಿ ನ. 26ರಂದು ಸಂಜೆ ಆರು ಗಂಟೆ ಸುಮಾರಿಗೆ ನಡೆದಿದೆ.
ಮೃತರನ್ನು ಚಿಕ್ಕಮಗಳೂರು ಜಿಲ್ಲೆಯ ಜೈಪುರ ನಿವಾಸಿ ಶಂಕರ ಆಚಾರ್ಯ (48) ಹಾಗೂ ಅವರ ಪತ್ನಿ ಮಂಜುಳಾ(40) ಎಂದು ಗುರುತಿಸಲಾಗಿದೆ. ಮಂಜುಳಾ ನ.26ರಂದು ತನ್ನ ತಾಯಿ ಮನೆಯಾದ ಕಾರ್ಕಳದ ಮಂಜರಪಲ್ಕೆಗೆ ಪತಿ ಜೊತೆ ಬೈಕಿನಲ್ಲಿ ಬಂದಿದ್ದು, ಸಂಜೆ ಇವರು ಪತಿಯ ಬೈಕಿನಲ್ಲಿ ವಾಪಾಸ್ಸು ಜೈಪುರಕ್ಕೆ ಬಜಗೋಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುತ್ತಿದ್ದರು.
ಈ ವೇಳೆ ಎದುರುಗಡೆಯಿಂದ ಅಂದರೆ ಬಜಗೋಳಿ ಕಡೆಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಮಾರುತಿ ಓಮ್ನಿ ಕಾರು, ಶಂಕರ ಆಚಾರ್ಯ ಬೈಕಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಇವರಲ್ಲಿ ಶಂಕರ ಆಚಾರ್ಯ ರಸ್ತೆ ಮಧ್ಯೆ ಹಾಗೂ ಮಂಜುಳಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆಂದು ಪೊಲೀಸರು ತಿಳಿಸಿದ್ದಾರೆ.
ಈ ಅಪಘಾತದಿಂದ ಓಮ್ನಿ ಚಾಲಕ ಸತೀಶ್ ಪೂಜಾರಿ ಹಾಗೂ ಅದರಲ್ಲಿ ಪ್ರಯಾಣಿಸುತ್ತಿದ್ದ ಬಾಲಕನೋರ್ವ ಗಾಯಗೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.