ಹೆಜಮಾಡಿ ಟೋಲ್ ವಿರುದ್ಧ ಪ್ರತಿಭಟನೆ ತಾತ್ಕಾಲಿಕ ಹಿಂದೆಗೆತ: ಡಿ,1ರಂದು ಡಿಸಿ ಕಚೇರಿಯಲ್ಲಿ ಸಭೆ
ಬೇಡಿಕೆ ಈಡೇರದಿದ್ದಲ್ಲಿ ಮತ್ತೆ ಹೋರಾಟ

ಪಡುಬಿದ್ರಿ, ನ. 27: ಸ್ಥಳೀಯ ವಾಹನಗಳಿಗೆ ಹೆಜಮಾಡಿ ಟೋಲ್‍ಗೇಟ್‍ನಲ್ಲಿ ಟೋಲ್ ವಸೂಲಿ ಮಾಡುವುದನ್ನು ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯಿಂದ ಹೆಜಮಾಡಿ ಟೋಲ್ ಪ್ಲಾಝಾ ಬಳಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಯಿತು.
ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಪಕ್ಷಾತೀತವಾಗಿ ನೂರಾರು ಮಂದಿ ಪಾಲ್ಗೊಂಡಿದ್ದರು. ನವಯುಗ ಕಂಪೆನಿ ಗುತ್ತಿಗೆ ವಹಿಸಿಕೊಂಡಿರುವ ಕುಂದಾಪುರದಿಂದ ತಲಪಾಡಿವರೆಗಿನ 92. 45 ಕಿ.ಮೀ ವ್ಯಾಪ್ತಿಯ ಹೆದ್ದಾರಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಜನರ ಹಲವು ಬೇಡಿಕೆಗಳನ್ನು ಕಂಪೆನಿ ಇನ್ನೂ ಈಡೇರಿಸದೆ, ಟೋಲ್ ಸಂಗ್ರಹಕ್ಕೆ ಜಿಲ್ಲಾಡಳಿತ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಬಳಿಕ ಮಾತನಾಡಿದ ವಿದ್ಯಾಕುಮಾರಿ, ಮನವಿಯನ್ನು ಜಿಲ್ಲಾಧಿಕಾರಿ ಮತ್ತು ಲೋಕೋಪಯೋಗಿ ಇಲಾಖಾ ಮುಖ್ಯ ಕಾರ್ಯದರ್ಶಿಯವರ ಗಮನಕ್ಕೆ ತರುವುದಾಗಿ ಹೇಳಿದರು. ಅವರ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದರು. ಡಿ.1ರಂದು ಜಿಲ್ಲಾಧಿಕಾರಿ ಕಛೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ರಾ.ಹೆ ಕುರಿತು ಕರೆದ ಸಭೆಯಲ್ಲಿಯೂ ಈ ವಿಷಯವನ್ನು ಮಂಡಿಸಲಾಗುವುದು ಎಂದರು.
ಡಿ. ಒಂದರವರೆಗೆ ಸಭೆ ನಡೆಯಲಿರುವುದರಿಂದ ಅದುವರೆಗೂ ಕಾದು ನೋಡಲು ನಿರ್ಧರಿಸಿ, ಪ್ರತಿಭಟನೆ ಮುಕ್ತಾಯಗೊಳಿಸಲಾಯಿತು. ಡಿ.ಒಂದರಂದು ಜಲ್ಲಾಧಿಕಾರಿ ಕಛೇರಿಯಲ್ಲಿ ಉಸ್ತುವಾರಿ ಸಚಿವೆ ಡಾ.ಜಯಮಾಲಾರವರು ರಾಹೆ ಮತ್ತು ಟೋಲ್ ಸಂಬಂಧ ಕರೆದಿರುವ ಸಭೆಯಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಡಿ.3ರಂದು ಉಭಯ ಜಲ್ಲಾ ಬಂದ್ ಆಚರಿಸಲಾಗುವುದು ಮತ್ತು ಅದೇ ದಿನ ಹೆಜಮಾಡಿ ಟೋಲ್ ಪ್ಲಾಝಾ ಬಳಿ ಹತ್ತು ಸಾವಿರ ಜನರನ್ನು ಸೇರಿಕೊಂಡು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ನಿರ್ಧರಿಸಲಾಗಿದೆ.
ಶಾಸಕ ಲಾಲಾಜಿ ಮೆಂಡನ್ ಮಾತನಾಡಿ, ಟೋಲ್ ಪ್ಲಾಝಾ ಸುತ್ತಲಿನ ಇಪ್ಪತ್ತು ಕಿ.ಮೀ ವ್ಯಾಪ್ತಿಯ ವಾಹನಗಳಿಗೆ ಹಾಗೂ ಹೆಜಮಾಡಿಗೆ ಸಂಚರಿಸುವ ಸರ್ವಿಸ್ ಬಸ್‍ಗಳಿಗೆ ಟೋಲ್ ವಿನಾಯಿತಿ ನೀಡಬೇಕು. ಅಪೂರ್ಣವಾಗಿರುವ ಹೆದ್ದಾರಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಹೆದ್ದಾರಿಗಾಗಿ ಭೂಮಿ ಕಳೆದುಕೊಂಡವರ ತ್ಯಾಗಕ್ಕೆ ಬೆಲೆ ನೀಡಲಾಗಿಲ್ಲ. ಹೊರ ರಾಜ್ಯದವರಿಗೆ ಟೋಲ್ ಗುತ್ತಿಗೆಯನ್ನು ನೀಡುತ್ತಿದ್ದು, ಟೋಲ್‍ನಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಬೇಕು. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಡಿಸೆಂಬರ್ ಒಂದರಂದು ನಡೆಯುವ ಸಭೆಯಲ್ಲಿ ನಮ್ಮೆಲ್ಲ ಬೇಡಿಕೆಗಳಿಗೆ ಮನ್ನಣೆ ಸಿಗುವ ನಿರೀಕ್ಷೆ ಇದೆ ಎಂದರು.
ಅವಧಿವೇಶನದಲ್ಲಿ ಧ್ವನಿ: ಉಮನಾಥ್ ಕೋಟ್ಯಾನ್ ಮಾತನಾಡಿ, ಜಿಲ್ಲಾಡಳಿತ ಕಾನೂನು ಬಾಹಿರವಾಗಿ ಟೋಲ್ ಸಂಗ್ರಹಕ್ಕೆ ನಡೆಸುತ್ತಿದೆ. ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಿ ನ್ಯಾಯೋಚಿತವಾಗಿ ಸುಂಕ ವಸೂಲಿ ಮಾಡಲಿ. ಡಿ. 1ರಂದು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆಯುವ ಸಭೆವರೆಗೆ ಟೋಲ್ ಸಂಗ್ರಹವನ್ನು ಕೈಬಿಡಬೇಕು. ಮುಂದಿನ ಅಧಿವೇಶನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಗುವುದು. ಮೂಲ್ಕಿ, ಹಳೆಯಂಗಡಿ, ಕಿನ್ನಗೋಳಿ ಹಾಗೂ ಸುರತ್ಕಲ್ ಭಾಗದ ಜನರೊಂದಿಗೆ ಸೇರಿಕೊಂಡು ಟೋಲ್ ವಿರುದ್ಧ ಸಂಘಟಿತ ಹೋರಾಟ ನಡೆಸಲಾಗುವುದು.
ಪೊಲೀಸ್ ಭದ್ರತೆಯಲ್ಲಿ ಟೋಲ್ ಸಂಗ್ರಹ ಮುಂದುವರಿದಿದೆ. ಕಾರ್ಕಳ ಉಪವಿಭಾಗದ ಡಿವೈಎಸ್ಪಿ ಬೆಳ್ಳಿಯಪ್ಪ ನೇತೃತ್ವದಲ್ಲಿ ನೂರಾರು ಪೊಲೀಸರು, ಕಾರ್ಕಳ ತಹಶೀಲ್ದಾರ್ ಮಹಮ್ಮದ್ ಇಸಾಕ್, ಆರ್‍ಐ ಸುರೇಶ್ ರಾವ್, ಕಾಪು ತಾಲೂಕು ಕಂದಾಯ ಅಧಿಕಾರಿ ರವಿಶಂಕರ್ ಮತ್ತಿತರ ಅಧಿಕಾರಿಗಳು ಟೋಲ್‍ನಲ್ಲಿ ಕರ್ತವ್ಯದಲ್ಲಿ ನಿರತರಾಗಿದ್ದರು.
ಹೋರಾಟ ಸಮಿತಿಯ ಗುಲಾಂ ಮೊಹಮ್ಮದ್, ಶೇಖರ್ ಹೆಜ್ಮಾಡಿ, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಕಾಪು ದಿವಾಕರ ಶೆಟ್ಟಿ, ರವೀಂದ್ರನಾಥ ಹೆಗ್ಡೆ, ಯುವ ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷ ವಿಶ್ವಾಸ್ ವಿ.ಅಮೀನ್, ಬಿಜೆಪಿ ಕಾಪು ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಕಾಪು ಕಾಂಗ್ರೆಸ್ ಅಧ್ಯಕ್ಷ ನವೀನ್‍ಚಂದ್ರ ಸುವರ್ಣ, ಮಾಜಿ ಅಧ್ಯಕ್ಷ ನವೀನ್‍ಚಂದ್ರ ಜೆ.ಶೆಟ್ಟಿ, ಎಸ್‍ಡಿಪಿಐನ ಹನೀಫ್ ಮೂಳೂರು, ಬೆಳಣ್ಣು ಟೋಲ್ ಹೋರಾಟ ಸಮಿತಿಯ ಅಧ್ಯಕ್ಷ ಸುಹಾಸ್ ಹೆಗ್ಡೆ, ಶಿವಪ್ರಸಾದ್ ಶೆಟ್ಟಿ ಎಲ್ಲದಡಿ, ಮಿಥುನ್ ಆರ್.ಹೆಗ್ಡೆ, ಉದಯ ಶೆಟ್ಟಿ ಇನ್ನ,ಜಿಪಂ ಸದಸ್ಯರಾದ ಶಶಿಕಾಂತ್ ಪಡುಬಿದ್ರಿ,ಗೀತಾಂಜಲಿ ಸುವರ್ಣ,ಶಿಲ್ಪಾ ಸುವರ್ಣ,ರೇಷ್ಮಾ ಶೆಟ್ಟಿ ಮತ್ತು ಗಣೇಶ್ ಕೋಟ್ಯಾನ್ ಕಾರ್ಕಳ,ತಾಪಂ ಸದಸ್ಯರಾದ ರೇಣುಕಾ ಪುತ್ರನ್,ನೀತಾ ಗುರುರಾಜ್,ಯುಸಿ ಶೇಖಬ್ಬ, ಶರತ್ ಕುಬೆವೂರು ಮತ್ತು ದಿನೇಶ್ ಕೋಟ್ಯಾನ್ ಫಲಿಮಾರು, ಮುಲ್ಕಿ ನಪಂ ಅಧ್ಯಕ್ಷ ಸುನಿಲ್ ಆಳ್ವ, ಮಧು ಆಚಾರ್ಯ, ದೇವಣ್ಣ ನಾಯಕ್, ಗ್ರಾಪಂ ಅಧ್ಯಕ್ಷರುಗಳಾದ ವಿಶಾಲಾಕ್ಷಿ ಪುತ್ರನ್, ದಮಯಂತಿ ಅಮೀನ್, ಡೇವಿಡ್ ಡಿಸೋಜಾ ಮತ್ತು ಜಿತೇಂದ್ರ ಫುರ್ಟಾಡೋ,ರಾಜೇಶ್ ಕೋಟ್ಯಾನ್,ಜಿಲ್ಲಾ ಕಾರು ಚಾಲಕ ಸಂಘದ ರಮೇಶ್ ಕೋಟ್ಯಾನ್, ಲೋಕೇಶ್ ಕಂಚಿನಡ್ಕ, ಶರಣ್ ಮಟ್ಟು,ಹರೀಶ್ ಶೆಟ್ಟಿ, ರವಿ ಶೆಟ್ಟಿ, ಸಂತೋಷ್ ಶೆಟ್ಟಿ, ಶಶಿಕಾಂತ್ ಶೆಟ್ಟಿ, ಧನಂಜಯ ಮಟ್ಟು, ದೀಪಕ್ ಎರ್ಮಾಳು, ಸುಧೀರ್ ಕರ್ಕೇರ, ವಿನೋದ್ ಸಾಲ್ಯಾನ್, ಪಾಂಡುರಂಗ ಕರ್ಕೇರ, ರಮಾಕಾಂತ ದೇವಾಡಿಗ, ಅನ್ಸಾರ್, ರಮೀಝ್ ಹುಸೈನ್, ಬುಡಾನ್ ಸಾಹೇಬ್, ಮಜೀದ್ ಪೊಲ್ಯ, ಶರೀಫ್ ಕರೀಂ, ಕಿಶೋರ್ ಎರ್ಮಾಳ್, ಕೇಶವ ಹೆಜಮಾಡಿ, ಸುಧೀರ್ ಹೆಜಮಾಡಿ, ಹನೀಫ್ ಕನ್ನಂಗಾರ್, ಕಬೀರ್ ಕನ್ನಂಗಾರ್, ಸಿ.ಪಿ. ಅಬ್ದುಲ್ ರೆಹ್ಮಾನ್, ಜಮಾಲ್ ಪಡುಬಿದ್ರಿ ಮತ್ತಿತರರು ಭಾಗವಹಿಸಿದ್ದರು.