ಅಪ್ಪಿಕೊಳ್ಳುವುದು ಪಂಜಾಬಿಗಳಲ್ಲಿ ಸಾಮಾನ್ಯ, ಆದರೆ ಇದು ರಫೇಲ್ ಒಪ್ಪಂದದಂತಲ್ಲ: ಸಿಧು
ಹೊಸದಿಲ್ಲಿ, ನ. 27: ಪಾಕಿಸ್ತಾನದ ಸೇನಾ ವರಿಷ್ಠ ಖಮರ್ ಜಾವೆದ್ ಬಾಜ್ವಾ ಅವರನ್ನು ಅಪ್ಪಿಕೊಳ್ಳುವ ಮೂಲಕ ವಿವಾದಕ್ಕೆ ಸಿಲುಕಿದ ಪಂಜಾಬ್‌ನ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ತಿಂಗಳುಗಳ ಬಳಿಕ ಮಂಗಳವಾರ, ಅಪ್ಪಿಕೊಳ್ಳುವುದು ಅಭಿನಂದಿಸುವ ಪಂಜಾಬ್‌ನ ರೀತಿ. ಇದು ರಫೇಲ್ ಒಪ್ಪಂದದಂತೆ ಅಲ್ಲ ಎಂದಿದ್ದಾರೆ.
ಕರ್ತಾರ್ಪುರ್ ಕಾರಿಡರ್ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಲಾಹೋರ್‌ನಲ್ಲಿರುವ ಸಿಧು, ಮಂಗಳವಾರ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ.
ಅಪ್ಪಿಕೊಂಡಿರುವುದಕ್ಕೆ ತನ್ನನ್ನು ಸಮರ್ಥಿಸಿಕೊಂಡ ಸಿಧು, ರಫೇಲ್ ಒಪ್ಪಂದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಬ್ಬರು ಪಂಜಾಬಿಗಳು ಭೇಟಿಯಾದಾಗ ಪರಸ್ಪರ ಅಪ್ಪಿಕೊಳ್ಳುತ್ತೇವೆ. ಇದು ಪಂಜಾಬ್‌ನಲ್ಲಿ ಸಾಮಾನ್ಯ ಎಂದು ಅವರು ಹೇಳಿದ್ದಾರೆ.
ಸಿಕ್ಖ್ ಯಾತ್ರಾರ್ಥಿಗಳಿಗಾಗಿ ಕರ್ತಾರ್ಪುರ ಕಾರಿಡರ್ ನಿರ್ಮಾಣದ ಬಗ್ಗೆ ಮಾತನಾಡಿದ ಸಿಧು, ಈ ಕಾರಿಡಾರ್ ಎರಡು ದೇಶಗಳ ನಡುವೆ ಸೇತುವೆಯಾಗಲಿದೆ ಹಾಗೂ ದ್ವೇಷವನ್ನು ಕಡಿಮೆ ಮಾಡಲಿದೆ ಎಂದಿದ್ದಾರೆ.
ಕರ್ತಾರ್ಪುರ ಕಾರಿಡರ್‌ಗೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಬುಧವಾರ ಶಿಲಾನ್ಯಾಸ ನೆರವೇರಿಸಲಿದ್ದಾರೆ.