ಮಂಡ್ಯ: ವಿವಿಧ ಬೇಡಿಕೆಗಳ ಈಡೇರಿಕೆಗೆ ರೈತಸಂಘ ಒತ್ತಾಯ; ಮಳವಳ್ಳಿ ತಾಲೂಕು ಕಚೇರಿಗೆ ಮುತ್ತಿಗೆ

ಮಂಡ್ಯ, ನ.27: ರೈತರ ಸಂಪೂರ್ಣ ಸಾಲಮನ್ನಾ, ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ, ತಾಲೂಕು ಕಚೇರಿ ಭ್ರಚ್ಟಾಚಾರ ತಡೆ ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತಸಂಘದ (ಮೂಲ ಸಂಘಟನೆ) ಕಾರ್ಯಕರ್ತರು ಮಂಗಳವಾರ ಮಳವಳ್ಳಿಯಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಆನಂತ್‍ರಾಂ ವೃತ್ತದಲ್ಲಿ ಜಮಾವಣೆಗೊಂಡು ಮಾನವ ಸರಪಳಿ ನಿರ್ಮಿಸಿ ಕೆಲ ಕಾಲ ರಸ್ತೆತಡೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೈತರು, ನಂತರ ತಾಲೂಕು ಕಚೇರಿಗೆ ಮುತ್ತಿಗೆಹಾಕಿ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಸಂಘದ ಜಿಲ್ಲಾಧ್ಯಕ್ಷ ಬೋರಾಪುರ ಶಂಕರೇಗೌಡ ಮಾತನಾಡಿ, ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗದೇ ಸಾಲದ ಸುಳಿಯಲ್ಲಿ ಸಿಲುಕಿ ರೈತರು ಆತ್ಮಹತ್ಯೆ ಹಾದಿ ಹಿಡಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೇವಲ ಭರವಸೆಗಳನ್ನು ನೀಡುತ್ತಿವೆಯೇ ಹೊರತು ರೈತ ಪರ ಆಳ್ವಿಕೆ ನಡೆಸುವಲ್ಲಿ ವಿಫಲ ಕಂಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಬ್ಬು, ಭತ್ತ, ರೇಷ್ಣೆ, ಹಾಲು ಸೇರಿದಂತೆ ರೈತರು ಯಾವುದೇ ಬೆಳೆಗಳನ್ನು ಬೆಳೆದರೂ ಬೆಲೆ ಸಿಗುತ್ತಿಲ್ಲ. ಸ್ವಾತಂತ್ರ್ಯ ಬಂದು 72ವರ್ಷ ಕಳೆಯುತ್ತಿದ್ದರೂ ರೈತರು ನೆಮ್ಮದಿಯಿಂದ ಇಂದಿಗೂ ಬದುಕಲು ಸಾಧ್ಯವಾಗುತ್ತಿಲ್ಲ. ಸರಕಾರಗಳು ರೈತರ ಮೂಗಿಗೆ ತುಪ್ಪ ಸವರುವ ಬದಲು ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ತಾಕೀತು ಮಾಡಿದರು.
ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಸರಿಯಾದ ಸಮಯಕ್ಕೆ ಸಂಬಳ ನೀಡಲಾಗುತ್ತಿದೆ. ಎರಡು ಮೂರು ದಿನ ಸಂಬಳ ಕೊಡುವುದು ನಿಧಾನವಾದರೂ ತಡೆದುಕೊಳ್ಳಲು ಆಗುವುದಿಲ್ಲ. ಆದರೆ, ರೈತರಿಗೆ ಬೆಳೆ ವಿಮೆ ಹಣವನ್ನು ಕಟ್ಟಿಸಿಕೊಂಡು 2 ವರ್ಷವಾದರೂ ವಿಮೆ ಹಣವನ್ನು ನೀಡಿಲ್ಲವೆಂದು ಅವರು ಕಿಡಿಕಾರಿದರು.
ತಾಲೂಕು ಕಚೇರಿ ಭ್ರಷ್ಟಾಚಾರದ ಕೂಪವಾಗಿದೆ. ರೈತರಿಗೆ ಮತ್ತು ಜನ ಸಮಾನ್ಯರಿಗೆ ಸಿಗಬೇಕಿದ್ದ ಯಾವುದೇ ದಾಖಲಾತಿಗಳು ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ. ಲಂಚ ನೀಡಿದರೇ ಮಾತ್ರ ದಾಖಲಾತಿಗಳು ಬೇಗನೆ ಸಿಗುತ್ತವೆ. ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಕೂಡಲೇ ಆಗತ್ಯ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.
ಸಂಘದ ತಾಲೂಕು ಅಧ್ಯಕ್ಷ ಶಿವರುದ್ರ ಮಾತನಾಡಿ, ಚುನಾವಣೆ ಪೂರ್ವದಲ್ಲಿ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸಬೇಕು. ರೈತರ ಮತ್ತು ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ ಮಾಡಬೇಕು. ಕಬ್ಬಿಗೆ ನಿಗಧಿಪಡಿಸಿರುವ ಎಫ್‍ಆರ್‍ಪಿ ಬೆಲೆ 2,612 ರೂ. ಜತೆಗೆ ರಾಜ್ಯ ಸರಕಾರ 500 ರೂ. ಸಲಹಾ ದರ ಸೇರಿಸಿ ಒಟ್ಟು 3,112 ರೂ. ನೀಡಬೇಕು. ಕ್ವಿಂಟಾಲ್ ಭತ್ತಕ್ಕೆ 2,200 ಬೆಲೆ ನಿಗಧಿಮಾಡಬೇಕು. ರಸಗೊಬ್ಬರ ಹಾಗೂ ಅಡುಗೆ ಅನಿಲಬೆಲೆಯನ್ನು ಕಡಿಮೆ ಮಾಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜೇ ಆರಸ್, ಕಾರ್ಯಧ್ಯಕ್ಷ ಚಿಕ್ಕಮೂಲಗೂಡು ನಾಗರಾಜು, ಉಪಾಧ್ಯಕ್ಷ ಬಸವರಾಜು, ಮಹೇಶ್, ಶಿವರಾಜೇ ಆರಸ್, ಮಹದೇವು, ಬಸವರಾಜು, ಚಿಕ್ಕೀರ, ಭೂಮಿಗೌಡ, ಇತರರು ಭಾಗವಹಿಸಿದ್ದರು.







