ಇಂದಿನಿಂದ ಭುವನೇಶ್ವರದಲ್ಲಿ ಪುರುಷರ ಹಾಕಿ ವಿಶ್ವಕಪ್

ಭುವನೇಶ್ವರ, ನ.27: ಹದಿನಾಲ್ಕನೇ ಆವೃತ್ತಿಯ ಪುರುಷರ ಹಾಕಿ ವಿಶ್ವಕಪ್ ಬುಧವಾರ ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿ ಆರಂಭಗೊಳ್ಳಲಿದೆ. ನ.28ರಿಂದ ಡಿ.16ರ ತನಕ 19 ದಿನಗಳ ಕಾಲ ನಡೆಯಲಿರುವ ಹಾಕಿ ವಿಶ್ವಕಪ್‌ನಲ್ಲಿ ವಿಶ್ವದ ಹದಿನಾರು ತಂಡಗಳು ಪ್ರಶಸ್ತಿಗಾಗಿ ಹಣಾಹಣಿ ನಡೆಸಲಿವೆ.
4 ಗುಂಪುಗಳಲ್ಲಿ ತಲಾ 4 ತಂಡಗಳು ಮುಂದಿನ ಹಂತಕ್ಕೇರಲು ಹಣಾಹಣಿ ನಡೆಸಲಿವೆ. ವಿಶ್ವಕಪ್‌ನ ಆತಿಥ್ಯ ವಹಿಸಿಕೊಂಡಿರುವ ಭಾರತ ಎಫ್‌ಐಎಚ್ ರ‍್ಯಾಂಕಿಂಗ್ನಲ್ಲಿ 5ನೇ ಸ್ಥಾನದಲ್ಲಿದೆ. ಭಾರತ ‘ಸಿ’ ಗುಂಪಿನಲ್ಲಿ ರಿಯೋ ಒಲಿಂಪಿಕ್ಸ್ ರನ್ನರ್ಸ್ ಅಪ್‌ಬೆಲ್ಜಿಯಂ ತಂಡ, ಕೆನಡಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳನ್ನು ಎದುರಿಸಲಿದೆ. ಪ್ರತಿಯೊಂದು ಗುಂಪಿನಲ್ಲೂ ಅಗ್ರಸ್ಥಾನ ಪಡೆಯುವ ತಂಡಗಳು ಕ್ವಾರ್ಟರ್ ಫೈನಲ್‌ಗೆ ನೇರ ಪ್ರವೇಶ ಪಡೆಯಲಿವೆ.ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸುವ ತಂಡಗಳು ಕ್ರಾಸ್ ಓವರ್ ಪಂದ್ಯಗಳ ಮೂಲಕ ಅಂತಿಮ 8ರಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಸೆಣಸಾಡಲಿವೆ. ಪ್ರತಿಯೊಂದು ಗ್ರೂಪ್‌ನಲ್ಲೂ ಕೊನೆಯ ಸ್ಥಾನ ಪಡೆಯುವ ತಂಡಗಳು ಹೊರ ನಡೆಯಲಿವೆ.

► ಭಾರತಕ್ಕೆ 2ನೇ ಬಾರಿ ವಿಶ್ವಕಪ್ ಗೆಲ್ಲುವ ಕನಸು
ಹದಿನಾಲ್ಕನೇ ಆವೃತ್ತಿಯ ಪುರುಷರ ಹಾಕಿ ವಿಶ್ವಕಪ್ ಟೂರ್ನಮೆಂಟ್‌ನ ಮೊದಲ ಪಂದ್ಯದಲ್ಲಿ ಬುಧವಾರ ‘ಸಿ’ ಗುಂಪಿನಲ್ಲಿ ಬೆಲ್ಜಿಯಂನ್ನು ಕೆನಡಾ ಮತ್ತು ಎರಡನೇ ಪಂದ್ಯದಲ್ಲಿ ದ.ಆಫ್ರಿಕವನ್ನು ಭಾರತ ಎದುರಿಸಲಿದೆ.
ಭಾರತ ಹಾಕಿ ವಿಶ್ವಕಪ್‌ನ 48 ವರ್ಷಗಳ ಇತಿಹಾಸದಲ್ಲಿ ಒಂದು ಬಾರಿ ವಿಶ್ವಕಪ್ ಜಯಿಸಿತ್ತು. ಒಂದು ಬಾರಿ 2ನೇ ಮತ್ತು ಮತ್ತೊಂದು ಬಾರಿ ಮೂರನೇ ಸ್ಥಾನ ಪಡೆದಿತ್ತು.
1971ರಲ್ಲಿ ಸ್ಪೇನ್‌ನ ಬಾರ್ಸಿಲೋನಾದಲ್ಲಿ ನಡೆದ ಚೊಚ್ಚಲ ವಿಶ್ವಕಪ್‌ನಲ್ಲಿ ಭಾರತ ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿತ್ತು. ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಕೀನ್ಯಾವನ್ನು ಹೆಚ್ಚುವರಿ ಸಮಯದಲ್ಲಿ 2-1 ಅಂತರದಲ್ಲಿ ಮಣಿಸಿ ಮೂರನೇ ಸ್ಥಾನ ಪಡೆದಿತ್ತು.
1973ರಲ್ಲಿ ಹಾಲೆಂಡ್‌ನಲ್ಲಿ ನಡೆದ ಎರಡನೇ ಆವೃತ್ತಿಯ ಫೈನಲ್‌ನಲ್ಲಿ ಆತಿಥೇಯ ಹಾಲೆಂಡ್ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ 2-4 ಅಂತರದಲ್ಲಿ ಸೋತು ಎರಡನೇ ಸ್ಥಾನ ಗಿಟ್ಟಿಸಿಕೊಂಡಿತ್ತು.
1975ರಲ್ಲಿ ಕೌಲಾಲಂಪುರದಲ್ಲಿ ನಡೆದ ಮೂರನೇ ಆವೃತ್ತಿಯ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 2-1 ಅಂತರದಲ್ಲಿ ಬಗ್ಗು ಬಡಿದು ಮೊದಲ ಬಾರಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
1975ರಲ್ಲಿ ಮೊದಲ ವಿಶ್ವಕಪ್ ಜಯಿಸಿದ್ದ ಭಾರತಕ್ಕೆ ಆ ಬಳಿಕ ಪ್ರಶಸ್ತಿ ಜಯಿಸಲು ಸಾಧ್ಯವಾಗಲಿಲ್ಲ. 10 ಆವೃತ್ತಿಗಳಲ್ಲಿ ಕನಿಷ್ಠ ಸೆಮಿಫೈನಲ್ ತಲುಪಲು ಸಾಧ್ಯವಾಗಿರಲಿಲ್ಲ. ಕಳೆದ 43 ವರ್ಷಗಳಲ್ಲಿ ಭಾರತಕ್ಕೆ ಸೆಮಿಫೈನಲ್ ತಲುಪಲು ಸಾಧ್ಯವಾಗಲಿಲ್ಲ.
ಭಾರತದಲ್ಲಿ ಮೂರನೇ ಬಾರಿ ವಿಶ್ವಕಪ್ ನಡೆಯುತ್ತಿದೆ. 1992ರಲ್ಲಿ ಮೊದಲ ಬಾರಿ ಮುಂಬೈನಲ್ಲಿ ವಿಶ್ವಕಪ್ ನಡೆದಾಗ ಭಾರತ 5ನೇ ಸ್ಥಾನ ಪಡೆದಿತ್ತು. 2010ರಲ್ಲಿ ದಿಲ್ಲಿಯಲ್ಲಿ 8ನೇ ಸ್ಥಾನ ಪಡೆದಿತ್ತು. ಈ ಬಾರಿ ಮತ್ತೆ ಕಪ್ ಗೆಲ್ಲುವ ಕನಸು: ಎರಡು ವರ್ಷಗಳ ಹಿಂದೆ ಜೂನಿಯರ್ ವಿಶ್ವಕಪ್ ಜಯಿಸಿದ್ದ ತಂಡದಲ್ಲಿದ್ದ 18ಆಟಗಾರರ ಪೈಕಿ 7 ಮಂದಿ ಈ ಬಾರಿಯ ಭಾರತದ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹರೀಂದರ್ ಸಿಂಗ್ ಜೂನಿಯರ್ ತಂಡದ ಕೋಚ್ ಆಗಿದ್ದರು. ಇದೀಗ ಅವರು ಭಾರತದ ವಿಶ್ವಕಪ್ ತಂಡದ ಕೋಚ್ ಆಗಿದ್ದಾರೆ.
7 ಮಂದಿ ಆಟಗಾರರು ಕಳೆದ ವಿಶ್ವಕಪ್‌ನಲ್ಲಿ ಆಡಿರುವ ಅನುಭವ ಹೊಂದಿದ್ದಾರೆ. ಮನ್‌ಪ್ರೀತ್ ಸಿಂಗ್, ಪಿ.ಆರ್.ಶ್ರೀಜೇಶ್, ಆಕಾಶ್‌ದೀಪ್ ಸಿಂಗ್, ಬೀರೇಂದ್ರ ಲಕ್ರಾ ತಂಡದಲ್ಲಿರುವ ಹಿರಿಯ ಆಟಗಾರರು. 19ರ ಹರೆಯದ ದಿಲ್‌ಪ್ರೀತ್ ತಂಡದಲ್ಲಿರುವ ಕಿರಿಯ ಆಟಗಾರ. ರೂಪಿಂದರ್ ಪಾಲ್ ಸಿಂಗ್ ತಂಡದಲ್ಲಿ ಸ್ಥಾನ ಪಡೆದಿಲ್ಲ. ಕನ್ನಡಿಗ ಎಸ್. ವಿ.ಸುನೀಲ್ ಗಾಯಗೊಂಡಿದ್ದಾರೆ.








