ಅಯೋಧ್ಯೆ ತೀರ್ಪು ವಿಳಂಬಕ್ಕೆ ಸುಪ್ರೀಂಕೋರ್ಟ್ ವಿರುದ್ಧ ಆರ್‌ಎಸ್‌ಎಸ್ ಮುಖಂಡ ಇಂದ್ರೇಶ್ ಕುಮಾರ್ ವಾಗ್ದಾಳಿ
"ಕೇಂದ್ರ ಸರಕಾರ ಕಾನೂನು ತರಲು ಸಜ್ಜಾಗಿದೆ"

ಚಂಡೀಗಡ, ನ.28: ಅಯೋಧ್ಯೆ ಮಂದಿರ-ಮಸೀದಿ ವಿವಾದಕ್ಕೆ ಸಂಬಂಧಿಸಿದ ತೀರ್ಪು ಮುಂದೂಡಲ್ಪಟ್ಟಿರುವುದಕ್ಕೆ ಸುಪ್ರೀಂಕೋರ್ಟ್ ವಿರುದ್ಧವೇ ವಾಗ್ದಾಳಿ ನಡೆಸಿರುವ ಆರ್‌ಎಸ್‌ಎಸ್ ಮುಖಂಡ ಇಂದ್ರೇಶ್ ಕುಮಾರ್,‘‘ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿ ತೀರ್ಪು ವಿಳಂಬ ಮಾಡುತ್ತಿರುವ ಮೂವರು ನ್ಯಾಯಾಧೀಶರ ಪೀಠದಲ್ಲಿರುವವರು ಯಾರೆಂದು 125 ಕೋಟಿ ಭಾರತೀಯರಿಗೆ ತಿಳಿದಿದೆ. ನಾನು ಅವರ ಹೆಸರನ್ನು ಹೇಳಲಾರೆ. ಈ ನ್ಯಾಯಪೀಠ ನ್ಯಾಯವನ್ನು ವಿಳಂಬ ಮಾಡುತ್ತಿದೆ. ನಿರಾಕರಿಸುತ್ತಿದೆ ಹಾಗೂ ಅಗೌರವಿಸುತ್ತಿದೆ. ಜನರ ಭಾವನೆಗೆ ಅಗೌರವ ನೀಡುತ್ತಿದೆ ಸುಪ್ರೀಂಕೋರ್ಟ್, ನ್ಯಾಯಾಧೀಶರು ಹೀಗೆ ಮಾಡಬಾರದು ಎಂದು ಹೇಳಿದ್ದಾರೆ.
ಕೇಂದ್ರ ಸರಕಾರ ರಾಮಜನ್ಮ ಭೂಮಿ-ಬಾಬ್ರಿ ಮಸೀದಿ ವಿವಾದಕ್ಕೆ ಸಂಬಂಧಿಸಿ ಕಾನೂನು ತರಲು ಸಜ್ಜಾಗಿದೆ. ಈಗ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಕಾರಣ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ವೌನವಹಿಸಿದೆ. ನಾವೆಲ್ಲರೂ ಅಸಹಾಯಕರಾಗಿ ಎಲ್ಲವನ್ನೂ ನೋಡುತ್ತಿದ್ದೇವೆ. ಇದು ಏಕೆ ಹಾಗೂ ಯಾಕಾಗಿ? ಭಯೋತ್ಪಾದನೆ ವಿರುದ್ಧ ಪ್ರಕರಣವನ್ನು ಅರ್ಧರಾತ್ರಿಯಲ್ಲಿ ವಿಚಾರಣೆ ನಡೆಸಲಾಗುತ್ತದೆ. ಇದು ಶಾಂತಿಗೆ ಅಪಮಾನ ಹಾಗೂ ಅಪಹಾಸ್ಯವಾಗಿದೆ. ಬ್ರಿಟಿಷರು ಕೂಡ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಇಂತಹ ದೌರ್ಜನ್ಯ ತೋರುವ ಸಾಹಸ ಮಾಡಿರಲಿಲ್ಲ ಎಂದು ಜೋಶಿ ಫೌಂಡೇಶನ್ ಪಂಜಾಬ್ ವಿವಿ ಆವರಣದಲ್ಲಿ ಏರ್ಪಡಿಸಿದ್ದ ‘ಜನ್ಮಭೂಮಿ ಮೇ ಅನ್ಯಾಯ್ ಕ್ಯೋಂ’ ಎಂಬ ವಿಚಾರಸಂಕಿರಣದಲ್ಲಿ ಮಾತನಾಡುತ್ತಾ ಇಂದ್ರೇಶ್ ಹೇಳಿದ್ದಾರೆ.







