ತೆಲಂಗಾಣ ವಿಧಾನಸಭಾ ಚುನಾವಣೆ: ತೃತೀಯ ಲಿಂಗಿ ಅಭ್ಯರ್ಥಿಯೇ ನಾಪತ್ತೆ
ಹೈದರಾಬಾದ್, ನ.28: ತೆಲಂಗಾಣ ರಾಜ್ಯ ವಿಧಾನಸಭೆಯಲ್ಲಿ ಗೋಶಾಮಹಲ್ ಕ್ಷೇತ್ರದಿಂದ ಬಹುಜನ ಎಡ ರಂಗ(ಬಿಎಸ್‌ಎಫ್)ಪಕ್ಷದಿಂದ ಸ್ಪರ್ಧಿಸಿದ್ದ ತೃತೀಯ ಲಿಂಗಿ ಅಭ್ಯರ್ಥಿ ಚಂದ್ರಮುಖಿ ಮವ್ವಲಾ ನ.27ರ ಬೆಳಗ್ಗೆಯಿಂದ ನಾಪತ್ತೆಯಾಗಿದ್ದಾರೆ. ಇವರನ್ನು ಅಪಹರಿಸಿರುವ ಶಂಕೆ ವ್ಯಕ್ತಪಡಿಸಲಾಗಿದೆ.
ಚಂದ್ರಮುಖಿ ಮನೆಯ ಸಮೀಪವಿರುವ ಬಂಜಾರ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ.
ಚಂದ್ರಮುಖಿ ಮನೆಯಿಂದ ನಾಪತ್ತೆಯಾಗಿದ್ದಾರೆ. ಅವರನ್ನು ಎಲ್ಲಿ ಹುಡುಕಿದರೂ ಪತ್ತೆ ಮಾಡಲು ಸಾಧ್ಯವಾಗಿಲ್ಲ. ಅವರು ಸಂಪರ್ಕಕ್ಕೂ ಸಿಗುತ್ತಿಲ್ಲ. ಅವರನ್ನು ಕಿಡ್ನಾಪ್ ಮಾಡಿರುವ ಶಂಕೆಯಿದೆ ಎಂದು ತೆಲಂಗಾಣ ಹಿಜ್ರಾ ಸಮಿತಿಯು ತಿಳಿಸಿದೆ.
ಚಂದ್ರಮುಖಿ ಸೋಮವಾರ ಚುನಾವಣಾ ಪ್ರಚಾರ ಆರಂಭಿಸಿದ್ದರು. ತಡರಾತ್ರಿ ಮನೆಗೆ ವಾಪಸಾಗಿದ್ದರು. ಅವರು ಬೆಳಗ್ಗೆ ಕೆಲವರು ಪುರುಷರ ಜೊತೆಗೂಡಿ ಹೊರಗೆ ಹೋಗಿದ್ದಾರೆಂದು ನಂಬಲಾಗುತ್ತಿದೆ. ಪೊಲೀಸರು ಸ್ಥಳವನ್ನು ಖಚಿತಪಡಿಸಲು ಸಿಸಿಟಿವಿ ಫುಟೇಜ್‌ನ್ನು ಪರಿಶೀಲಿಸಲು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚಂದ್ರಮುಖಿ ತೆಲಂಗಾಣದ ರಾಜ್ಯ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿರುವ ಏಕೈಕ ಹಾಗೂ ಮೊದಲ ತೃತೀಯ ಲಿಂಗಿ ಎನಿಸಿಕೊಂಡಿದ್ದಾರೆ. ತೃತೀಯ ಲಿಂಗಿ ಸದಸ್ಯರುಗಳು ಹಾಗೂ ಹಿಜ್ರಾ ಸಮುದಾಯಕ್ಕೆ ಆಗುತ್ತಿರುವ ದೌರ್ಜನ್ಯದ ಬಗ್ಗೆ ರ್ಯಾಲಿಗಳಲ್ಲಿ ಧ್ವನಿ ಎತ್ತಿದ್ದರು.