ಕಾವೂರಿನಲ್ಲಿ ಕರ್ಣಾಟಕ ಬ್ಯಾಂಕಿನ 825ನೇ ಶಾಖೆ ಶುಭಾರಂಭ
ಸಮಾಜದ ಎಲ್ಲಾ ವರ್ಗದವರಿಗೂ ಬ್ಯಾಂಕ್ ಸೇವಾ ಸೌಲಭ್ಯ ದೊರೆಯಲಿ: ಅರುಣ್ ಚಕ್ರವರ್ತಿ

ಮಂಗಳೂರು, ನ28: ಸಮಾಜದ ಎಲ್ಲಾ ವರ್ಗದವರಿಗೆ ಉತ್ತಮ ಸೇವಾ ಸೌಲಭ್ಯ ನೀಡುವ ಕರ್ಣಾಟಕ ಬ್ಯಾಂಕ್ ನ ಸೇವೆ ಇನ್ನಷ್ಟು ವಿಸ್ತರಿಸಲಿ ಎಂದು ಪಶ್ಚಿಮ ವಲಯ ಪೊಲೀಸ್ ಮಹಾ ನಿರೀಕ್ಷಕ ಜೆ.ಅರುಣ್ ಚಕ್ರವರ್ತಿ ಶುಭ ಹಾರೈಸಿದರು.
ಕರ್ಣಾಟಕ ಬ್ಯಾಂಕಿನ 825ನೇ ಶಾಖೆಯನ್ನು ನಗರದ ಕಾವೂರು ಗಾಂಧಿ ನಗರದಲ್ಲಿರುವ ಗಾಯತ್ರಿ ಟಿಂಬರ್ಸ್ ಕಟ್ಟಡದ ನೆಲಮಹಡಿಯಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಬ್ಯಾಂಕ್ ನ ಇ-ಲಾಬಿ, ಕ್ಯಾಷ್ ರಿಸೈಕ್ಲರ್ ನ್ನು ಶ್ರೀ ಆದಿ ಚುಂಚನಗಿರಿ ಕಾವೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಬ್ಯಾಂಕ್ ಬೆಳೆಯಲು ಗ್ರಾಹಕರ ನಂಬಿಕೆ ವಿಶ್ವಾಸಕ್ಕೆ ಪಾತ್ರವಾಗುವುದು ಮುಖ್ಯ. ಈ ನಿಟ್ಟಿನಲ್ಲಿ ಕರ್ಣಾಟಕ ಬ್ಯಾಂಕ್ ಯಶಸ್ವಿ ಯಾಗಿದೆ ಎಂದು ಶ್ಲಾಘಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ಎಂ.ಡಿ. ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಹಾಬಲೇಶ್ವರ ಎಂ.ಎಸ್. ಮಾತನಾಡಿ, ಸದ್ಯ ಬ್ಯಾಂಕ್ 1,15,000 ಕೋಟಿ ರೂ.ನ ಆರ್ಥಿಕ ವ್ಯವಹಾರ ಹಾಗೂ ಒಂದು ಕೋಟಿ ಗ್ರಾಹಕರನ್ನು ಹೊಂದಿದೆ ಎಂದರು.
ಹಾಲಿ ಆರ್ಥಿಕ ವರ್ಷದಲ್ಲಿ ಬ್ಯಾಂಕ್ ತನ್ನ ಶಾಖೆಗಳ ಸಂಖ್ಯೆಯನ್ನು 830ಕ್ಕೇರಿಸುವ ಗುರಿಯನ್ನು ಹೊಂದಿದೆ. ಈ ಗುರಿಯನ್ನು ಈ ವರ್ಷದ ಡಿಸೆಂಬರ್ ಅಂತ್ಯದೊಳಗೆ ಸಾಧಿಸಲಿದ್ದೇವೆ ಎಂದರು.
ಬ್ಯಾಂಕಿನ ಎಜಿಎಂ ರಮೇಶ್ ಭಟ್, ಶಾಖಾ ಪ್ರಬಂಧಕಿ ಸುಕನ್ಯ ಮೊದಲಾದವರು ಉಪಸ್ಥಿತರಿದ್ದರು. ಶೋಭಾ ಕಾರ್ಯಕ್ರಮ ನಿರೂಪಿಸಿದರು.