ದಯಾಮರಣ ಕೋರಿ ರಾಷ್ಟ್ರಪತಿಗೆ ಉನಾ ಸಂತ್ರಸ್ತ ಕುಟುಂಬದ ಪತ್ರ

ಅಹ್ಮದಾಬಾದ್,ನ.28: 2016,ಜು.11ರಂದು ಉನಾ ಜಿಲ್ಲೆಯ ಮೋಟಾ ಸಮಾಧಿಯಾಲಾ ಗ್ರಾಮದಲ್ಲಿ ಗೋಹತ್ಯೆಯ ಆರೋಪದಲ್ಲಿ ತಥಾಕಥಿತ ಗೋರಕ್ಷಕರಿಂದ ಅಮಾನುಷ ಥಳಿತಕ್ಕೊಳಗಾಗಿದ್ದ ಸಂತ್ರಸ್ತ ದಲಿತರು ಗುಜರಾತ್ ಸರಕಾರವು ತಮಗೆ ನೀಡಿದ್ದ ಯಾವುದೇ ಭರವಸೆಯನ್ನು ಈಡೇರಿಸಿಲ್ಲ ಎಂದು ಆರೋಪಿಸಿದ್ದು,ತಮಗೆ ದಯಾಮರಣಕ್ಕೆ ಅನುಮತಿಯನ್ನು ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ. ತಮ್ಮಲ್ಲೋರ್ವರು ಡಿ.7ರಿಂದ ದಿಲ್ಲಿಯಲ್ಲಿ ಆಮರಣಾಂತ ಉಪವಾಸವನ್ನು ಕೈಗೊಳ್ಳಲಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.
ತನ್ನ ಕುಟುಂಬದ ಪರವಾಗಿ ಮಂಗಳವಾರ ಈ ಪತ್ರವನ್ನು ಬರೆದಿರುವ ವಶ್ರಾಮ್ ಸರ್ವೈಯಾ(28) ಅವರು ತನ್ನ ಕುಟುಂಬ ಸದಸ್ಯರು ಮತ್ತು ಬಂಧುಗಳ ಮೇಲೆ ಹಲ್ಲೆ ನಡೆದ ಬಳಿಕ ಆಗಿನ ಗುಜರಾತ್ ಮುಖ್ಯಮಂತ್ರಿ ಆನಂದಿ ಬೆನ್ ಪಟೇಲ್ ಅವರು ಪ್ರತಿಯೊಬ್ಬ ಸಂತ್ರಸ್ತರಿಗೂ ಐದು ಎಕರೆ ಭೂಮಿ ಮತ್ತು ವಿದ್ಯಾರ್ಹತೆಗೆ ತಕ್ಕಂತೆ ಸರಕಾರಿ ಉದ್ಯೋಗವನ್ನು ನೀಡುವುದಾಗಿ ಭರವಸೆ ಕೊಟ್ಟಿದ್ದರು. ಮೋಟಾ ಸಮಾಧಿಯಾಲಾ ಗ್ರಾಮವನ್ನು ಅಭಿವೃದ್ಧಿಗೊಳಿಸುವುದಾಗಿಯೂ ಅವರು ಆಶ್ವಾಸನೆ ನೀಡಿದ್ದರು. ಘಟನೆಯು ನಡೆದು ಎರಡು ವರ್ಷ ನಾಲ್ಕು ತಿಂಗಳುಗಳೇ ಕಳೆದುಹೋಗಿದ್ದರೂ ಸರಕಾರವು ಒಂದೇ ಒಂದು ಭರವಸೆಯನ್ನು ಈಡೇರಿಸಿಲ್ಲ, ಈಡೇರಿಸಲು ಪ್ರಯತ್ನವನ್ನೂ ಮಾಡಿಲ್ಲ ಎಂದು ಹೇಳಿದ್ದಾರೆ.
ಗೋ ಹತ್ಯೆ ಮಾಡಿದ್ದಾರೆಂದು ಆರೋಪಿಸಿ ಗೋರಕ್ಷಕರ ಗುಂಪು ವಶ್ರಾಮ್,ಅವರ ಕಿರಿಯ ಸೋದರ ರಮೇಶ,ತಂದೆ ಬಾಲು ಮತ್ತು ತಾಯಿ ಕುನ್ವರ್ ಸೇರಿದಂತೆ ಎಂಟು ದಲಿತರನ್ನು ಅಮಾನವೀಯವಾಗಿ ಥಳಿಸಿದ್ದರು. ಈ ಘಟನೆಯ ವೀಡಿಯೊ ವೈರಲ್ ಆಗಿದ್ದು,ರಾಷ್ಟ್ರವ್ಯಾಪಿ ಆಕ್ರೋಶಕ್ಕೆ ಕಾರಣವಾಗಿತ್ತು. ರಾಜ್ಯಾದ್ಯಂತ ದಲಿತರು ಪ್ರತಿಭಟನೆ ನಡೆಸಿದ್ದರು. ಹಲವಾರು ಜನರು ಆತ್ಮಹತ್ಯೆಗೆ ಪ್ರಯತ್ನಿಸಿದ್ದು,ಈ ಪೈಕಿ ಓರ್ವ ಮೃತಪಟ್ಟಿದ್ದ. ದಲಿತರು ಸತ್ತ ದನದ ಚರ್ಮವನ್ನು ಸುಲಿಯುತ್ತಿದ್ದರು ಎನ್ನುವುದು ನಂತರ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.
“ಈ ದಾಳಿಯು ನಾವು ಸತ್ತ ದನಗಳ ಚರ್ಮ ಸುಲಿಯುವ ಸಾಪ್ರದಾಯಿಕ ವೃತ್ತಿಗೆ ತಿಲಾಂಜಲಿ ಇಡುವಂತೆ ಮಾಡಿದೆ. ನಮಗೆ ಜೀವನೋಪಾಯಕ್ಕೆ ಅನ್ಯ ಮಾರ್ಗಗಳೂ ಇಲ್ಲ. ಭವಿಷ್ಯದಲ್ಲಿ ನಾವು ಹಸಿವೆಯಿಂದ ಸಾಯುವ ಸಾಧ್ಯತೆಯಿದೆ. ನಾವು ಪದೇಪದೇ ಮೌಖಿಕ ಮತ್ತು ಲಿಖಿತ ಮನವಿಗಳನ್ನು ಮಾಡಿಕೊಂಡಿದ್ದರೂ ಗುಜರಾತ್ ಸರಕಾರವು ನಮ್ಮ ಯಾವುದೇ ಸಮಸ್ಯೆಗೆ ಕಿವಿಗೊಟ್ಟಿಲ್ಲ ಎಂದು ಪತ್ರದಲ್ಲಿ ತಿಳಿಸಿರುವ ವಶ್ರಾಮ್,ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ದಲಿತರ ವಿರುದ್ಧ ದಾಖಲಿಸಲಾಗಿರುವ ಪ್ರಕರಣಗಳನ್ನು ಸರಕಾರವು ಹಿಂದೆಗೆದುಕೊಳ್ಳದಿರುವುದು ತಮಗೆ ನೋವನ್ನುಂಟು ಮಾಡಿದೆ. ಇವೆಲ್ಲ ಸಂಪೂರ್ಣ ಸುಳ್ಳು ಪ್ರಕರಣಗಳಾಗಿವೆ ಎಂದಿದ್ದಾರೆ.
ರಾಜ್ಯ ಸರಕಾರವು ತಮಗೆ ಹಾಗೂ ಸಾಕ್ಷಿಗಳಿಗೆ ಸಾಕಷ್ಟು ಭದ್ರತೆಯನ್ನು ಒದಗಿಸುತ್ತಿಲ್ಲ ಎಂದಿರುವ ಅವರು,ತಮ್ಮ ಬದುಕು ದಯನೀಯವಾಗಿದೆ. ತಾನು ಮತ್ತು ತನ್ನ ಕುಟುಂಬ ಸಾಯಲು ಬಯಸಿದ್ದೇವೆ ಎಂದು ನೋವು ತೋಡಿಕೊಂಡಿದ್ದಾರೆ.
ಆರೋಪಿಗಳು ಜಾಮೀನು ಪಡೆದು ಹೊರಗೆ ಬರುತ್ತಿದ್ದು,ಜಾಮೀನಿನ ಷರತ್ತುಗಳನ್ನು ಉಲ್ಲಂಘಿಸುತ್ತಿದ್ದಾರೆ ಮತ್ತು ಇತರ ಅಪರಾಧಗಳಲ್ಲಿ ತೊಡಗಿಕೊಂಡಿದ್ದಾರೆ. ಹೀಗಿದ್ದರೂ ಸರಕಾರವು ಅವರ ಜಾಮೀನುಗಳನ್ನು ರದ್ದುಗೊಳಿಸಲು ಯಾವುದೇ ಪ್ರಯತ್ನಗಳನ್ನು ಮಾಡುತ್ತಿಲ್ಲ ಎಂದು ತಿಳಿಸಿರುವ ವಶ್ರಾಮ್,ಸರಕಾರವು ಆರೋಪಿಗಳ ಜಾಮೀನುಗಳನ್ನು ರದ್ದುಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು,ವೆರಾವಲ್ ನ್ಯಾಯಾಲಯಕ್ಕೆ ನಿಯೋಜಿತ ನ್ಯಾಯಾಲಯದ ಅಧಿಕಾರಗಳನ್ನು ನೀಡಬೇಕು ಮತ್ತು ಮೋಟಾ ಸಮಾಧಿಯಾಲಾದಲ್ಲಿ ಪೊಲೀಸ್ ಹೊರಠಾಣೆಯನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿದ್ದಾರೆ.







