ಮಂಗಳೂರು: ಡಿಸೆಂಬರ್ 1, 2ರಂದು ಜನನುಡಿ

ಮಂಗಳೂರು, ನ.28: ದೇಶದ ಜನ ಎದುರಿಸುತ್ತಿರುವ ಸವಾಲುಗಳಿಗೆ ಈ ದೇಶದ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿರೋಧದ ಮೂಲಕ ಉತ್ತರ ಕಂಡುಕೊಳ್ಳುವ ಆಶಯದೊಂದಿಗೆ ಹುಟ್ಟಿಕೊಂಡಿರುವ ‘ಜನನುಡಿ’ ಕಾರ್ಯಕ್ರಮ ಈ ಬಾರಿ ಡಿಸೆಂಬರ್ 1 ಮತ್ತು 2ರಂದು ನಗರದ ನಂತೂರಿನಲ್ಲಿರುವ ಶಾಂತಿ ಕಿರಣ ಸಭಾಂಗಣದಲ್ಲಿ ನಡೆಯಲಿದೆ.
ನಾಡಿನ ಖ್ಯಾತ ಚಿಂತಕ, ಸಂವಿಧಾನ ತಜ್ಞ, ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಜಸ್ಟಿಸ್ ನಾಗಮೋಹನ್ ದಾಸ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಲೇಖಕಿ ಡಾ. ವಿನಯಾ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಉದ್ಘಾಟನಾ ಗೋಷ್ಠಿಯ ಮುಖ್ಯ ಅತಿಥಿಯಾಗಿ ಬಹುಭಾಷಾ ನಟ ಪ್ರಕಾಶ್ ರೈ ಭಾಗವಹಿಸಲಿದ್ದಾರೆ.
ಚಿಂತಕರಾದ ಡಾ.ಹಸೀನಾ ಖಾದ್ರಿ, ದಲಿತ ಹೋರಾಟಗಾರ ಎಂ.ದೇವದಾಸ್ ಉಪಸ್ಥಿತರಿರುವರು. ‘ಭವಿಷ್ಯದ ಭಾರತ: ಮಾರ್ಕ್ಸ್- ಅಂಬೆಂಡ್ಕರ್- ಗಾಂಧಿ- ಲೋಹಿಯಾ’ ಎಂಬ ವಿಷಯದಲ್ಲಿ ಮೊದಲ ಗೋಷ್ಠಿಯಲ್ಲಿ ಜಿ.ರಾಜಶೇಖರ, ಡಾ.ಪುರುಷೋತ್ತಮ ಬಿಳಿಮಲೆ, ಡಾ.ಮುಝಫರ್ ಅಸ್ಸಾದಿ, ಡಾ.ಡಿ.ಡೊಮಿನಿಕ್ ವಿಚಾರ ಮಂಡನೆ ಮಾಡಲಿದ್ದಾರೆ.
‘ಭಾರತದ ಮುಸ್ಲಿಮರು’ ಗೋಷ್ಠಿಯಲ್ಲಿ ಹಿರಿಯ ಪತ್ರಕರ್ತ, ವಾರ್ತಾಭಾರತಿ ದೈನಿಕದ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ಉಪನ್ಯಾಸ ನೀಡಲಿದ್ದಾರೆ. ಮೊದಲ ದಿನದ ಸಂಜೆ ಕೊರಗರ ಗಜಮೇಳ, ಬ್ಯಾರಿ ಸಮುದಾಯದ ದಫ್ ಕುಣಿತ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ದಲಿತ ಹೋರಾಟಗಾರ್ತಿ ಸುಶೀಲಾ ನಾಡ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಎರಡನೇ ದಿನವಾದ ಡಿ.2ರಂದು ಬೆಳಗ್ಗೆ ಕವಿಗೋಷ್ಠಿ ನಡೆಯಲಿದ್ದು, ಮುಹಮ್ಮದ್ ಬಡ್ಡೂರ್, ವಿಲ್ಸನ್ ಕಟೀಲ್, ಹಾರೊಹಳ್ಳಿ ರವೀಂದ್ರ, ಸಹ್ಯಾದ್ರಿ ನಾಗರಾಜ್, ಸಂದೀಪ್ ಈಶಾನ್ಯ, ಪಿ.ಕೆ.ನವಲಗುಂದ, ಶ್ರೀಹರಿ ದೂಪದ, ವಿರೇಶ್ ನಾಯಕ, ಭುವನಾ ಹಿರೇಮಠ, ಸುನೈಫ್, ರಾಜಪ್ಪಭರಮಸಾಗರ, ದುರುಗೇಶ್ ಪೂಜಾರ್, ಸೌಮ್ಯಾ ಸಾಮಂತ್ರಿ, ಖಂಡು ಬಂಜಾರ ಯಾದಗಿರಿ, ಶೇಖರ್ ನಾಯಕ ಕನಕಗಿರಿ, ದೊಡ್ಡಕಲ್ಲಹಳ್ಳಿ ನಾರಾಯಣಪ್ಪ, ಚಾಂದ್ ಪಾಶ ಬೆಂಗಳೂರು, ಜ್ಯೋತಿ ಹಿಟ್ನಾಳ್, ರುಕ್ಮಿಣಿ ನಾಗಣ್ಣನವರ್, ಫೆಲ್ಸಿ ಲೋಬೊ ಕವನ ವಾಚನ ವಾಚನ ಮಾಡಲಿದ್ದಾರೆ. ಈ ಕವಿಗೋಷ್ಠಿಗೆ ಚಿದಂಬರ ನರೇಂದ್ರ ಚಾಲನೆ ನೀಡಲಿದ್ದಾರೆ.
‘ಹೊರಳುನೋಟ’ ಎಂಬ ಗೋಷ್ಠಿಯಲ್ಲಿ ಮಹೇಂದ್ರ ಕುಮಾರ್, ಸುಧೀರ್ ಕುಮಾರ್ ಮುರೊಳ್ಳಿ, ನಿಕೇತ್ ರಾಜ್ ಮೌರ್ಯ ವಿಷಯ ಮಂಡನೆ ಮಾಡಲಿದ್ದಾರೆ.
‘ದಲಿತ ಭಾರತ’ ಎಂಬ ಸಂವಾದಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ದಲಿತ ಚಿಂತಕ ಡಾ. ಎಂ.ನಾರಾಯಣ ಸ್ವಾಮಿ ವಹಿಸುವರು. ರವಿಕುಮಾರ್ ಟೆಲೆಕ್ಸ್, ಡಾ.ಪುಷ್ಪಾ ಅಮರೇಶ್ ವಿಚಾರ ಮಂಡನೆ ಮಾಡಲಿದ್ದಾರೆ.
‘ಮಹಿಳಾ ಭಾರತ’ ಸಂವಾದಗೋಷ್ಠಿಯ ಅಧ್ಯಕ್ಷತೆಯನ್ನು ಡಾ.ಎಚ್.ಎಸ್.ಅನುಪಮಾ ನಡೆಸಿಕೊಡಲಿದ್ದು, ಡಾ.ಚಮನ್ ಫರ್ಝಾನ, ಸೌಮ್ಯಾ ವಿಷಯ ಮಂಡನೆ ಮಾಡಲಿದ್ದಾರೆ.
ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ವಹಿಸುವರು. ಪ್ರೊ.ವಲೇರಿಯನ್ ರೊಡ್ರಿಗಸ್ ಸಮಾರೋಪ ಭಾಷಣ ಮಾಡಲಿದ್ದಾರೆ.
ಹಿರಿಯ ದಲಿತ ಚಳವಳಿಗಾರ ಮಾವಳ್ಳಿ ಶಂಕರ್, ಎಸ್.ವರಲಕ್ಷ್ಮೀ ಸಹಿತ ಹಲವು ಖ್ಯಾತನಾಮರು ಉಪಸ್ಥಿತರಿರುವರು ಎಂದು ಅಭಿಮತ ಮಂಗಳೂರು ಪ್ರಕಟನೆಯಲ್ಲಿ ತಿಳಿಸಿದೆ.