ಅಯೋಧ್ಯೆಯ ಬಳಿಕ ಮಥುರಾ, ಕಾಶಿ ಬಿಡುಗಡೆ: ಗೋ ಮಧುಸೂದನ್

ಉಡುಪಿ, ನ.28: ಅಯೋಧ್ಯೆಯ ರಾಮಜನ್ಮ ಭೂಮಿಯಲ್ಲಿ ಶ್ರೀರಾಮನ ಭವ್ಯ ಮಂದಿರ ನಿರ್ಮಾಣಕ್ಕೆ ಎಲ್ಲಾ ಸಿದ್ಧತೆಗಳು ನಡೆಯುತ್ತಿರುವಂತೆ ನಮ್ಮ ಮುಂದಿನ ಗುರಿ ಮಥುರಾದ ಕೃಷ್ಣ ಹಾಗೂ ಕಾಶಿಯ ವಿಶ್ವನಾಥನ ಬಿಡುಗಡೆಯಾಗಿದೆ ಎಂದು ಹಿರಿಯ ಬಿಜೆಪಿ ನಾಯಕ ಹಾಗೂ ವಿಧಾನ ಪರಿಷತ್‌ನ ಮಾಜಿ ಸದಸ್ಯ ಮೈಸೂರಿನ ಗೋ ಮಧುಸೂದನ್ ಹೇಳಿದ್ದಾರೆ.
ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥರ ಎರಡನೇ ಪರ್ಯಾಯದ ಮಹತ್ವಾಕಾಂಕ್ಷಿ ಯೋಜನೆಯಾದ ಉಡುಪಿ ಶ್ರೀಕೃಷ್ಣ ಮಠದ ಗರ್ಭ ಗುಡಿಗೆ ಚಿನ್ನದ ತಗಡು ಹೊದಿಸುವ ಕಾರ್ಯಕ್ಕೆ ಇಂದು ರಾಜಾಂಗಣದಲ್ಲಿ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಅವರು ಮಾತನಾಡುತಿದ್ದರು.
ಹಿಂದೂಗಳ ಬಹುಕಾಲದ ನಿರೀಕ್ಷೆಯಾದ ಅಯೋಧ್ಯೆಯಲ್ಲಿ ರಾಮನಿಗೆ ಭವ್ಯ ಮಂದಿರ ಕಟ್ಟಲು ಎಲ್ಲಾ ವ್ಯವಸ್ಥೆ ಪೂರ್ಣಗೊಳ್ಳುವ ಕಾಲಘಟ್ಟದಲ್ಲಿ ನಾವಿದ್ದೇವೆ. ರಾಮಜನ್ಮಭೂಮಿಗೆ ಈಗಾಗಲೇ ಮುಕ್ತಿ ಸಿಕ್ಕಿದೆ. ದೇಶದ ಸಾಧು-ಸಂತರು, ಜನಸಾಮಾನ್ಯರು ಅಲ್ಲಿ ಮಂದಿರ ನಿರ್ಮಾಣದ ಸಂಕಲ್ಪ ತೊಟ್ಟಿದ್ದಾರೆ. ಇದಕ್ಕೆ ಅವಕಾಶ ಮಾಡಿಕೊಡುವಂತೆ ಪ್ರಧಾನಿಗೆ ಮನವಿ ಮಾಡಲಾಗಿದೆ. ‘ಮೊದಲು ರಾಮಮಂದಿರ, ಬಳಿಕ ಚುನಾವಣೆ’ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ ಎಂದು ಗೋ ಮಧುಸೂದನ್ ತಿಳಿಸಿದರು.
ಮುಂದೆ ನಾವು ಕೃಷ್ಣನ ಜನ್ಮಸ್ಥಾನಕ್ಕೆ ಹಾಗೂ ಕಾಶಿಗೆ ಜೈ ಕೂಗುತ್ತೇವೆ. ಈ ಮೂರು ದೇವಸ್ಥಾನಗಳು ನಮಗೆ ಬೇಕೇಬೇಕು. ರಾಮ-ಕೃಷ್ಣರು ನಮಗೆ ಕೇವಲ ರಾಜರಲ್ಲ, ದೇವರು, ಭಗವಂತ, ಸೃಷ್ಟಿಕರ್ತ. ಅವರು ನಮ್ಮ ಹೃದಯದಲ್ಲಿ ನೆಲೆಸಿದ್ದಾರೆ ಎಂದರು.
ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸುವ ಜೊತೆ ಜೊತೆಗೆ ಶ್ರೀಕೃಷ್ಣ ಹಾಗೂ ಕಾಶಿ ವಿಶ್ವನಾಥರ ಬಿಡುಗಡೆ ನಮ್ಮ ಮುಂದಿನ ಗುರಿ. ಕೃಷ್ಣನ ಜನ್ಮಸ್ಥಾನದಲ್ಲಿರುವ ಔರಂಗಜೇಬನ ಮಸೀದಿ ಹಾಗೂ ಕಾಶಿ ವಿಶ್ವನಾಥನ ಜ್ಯೋರ್ತಿಲಿಂಗದಲ್ಲಿರುವ ಮಸೀದಿ ಎರಡೂ ಹೋಗ ಬೇಕಾಗಿದೆ ಎಂದರು.