ಸಚಿವ ಡಿಕೆಶಿ- ಯಡಿಯೂರಪ್ಪ ದಿಢೀರ್ ಭೇಟಿ: ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ

ಬೆಂಗಳೂರು, ನ. 28: ಮಹತ್ವದ ಬೆಳವಣಿಗೆಯೊಂದರಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಸೃಷ್ಟಿಸಿದೆ.
ಬುಧವಾರ ಇಲ್ಲಿನ ಶಿವಾನಂದ ವೃತ್ತದ ಬಳಿಯಲ್ಲಿರುವ ಸಚಿವ ಶಿವಕುಮಾರ್ ಅವರ ಸರಕಾರಿ ನಿವಾಸಕ್ಕೆ ಪುತ್ರ, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಹರತಾಳು ಹಾಲಪ್ಪ, ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ, ಸಂಸದ ಸಿದ್ದೇಶ್ವರ್ ಅವರೊಂದಿಗೆ ಆಗಮಿಸಿದ ಯಡಿಯೂರಪ್ಪ ಅವರನ್ನು ಹೂಗುಚ್ಛ ನೀಡಿ, ಶಿವಕುಮಾರ್ ಬರ ಮಾಡಿಕೊಂಡರು.
ಶಿವಮೊಗ್ಗ ಜಿಲ್ಲೆಯ ಸಿಗಂದೂರು ಸೇತುವೆ ನಿರ್ಮಾಣ, ಜಿಲ್ಲೆಯ ನೀರಾವರಿ ಯೋಜನೆಗಳ ಸಂಬಂಧ ಸಚಿವ ಡಿ.ಕೆ. ಶಿವಕುಮಾರ್ ಅವರೊಂದಿಗೆ ಯಡಿಯೂರಪ್ಪ ಸಮಾಲೋಚನೆ ನಡೆಸಿದ್ದು, ಸುಮಾರು 20 ನಿಮಿಷಗಳ ಕಾಲ ಚರ್ಚಿಸಿದ್ದಾರೆಂದು ಹೇಳಲಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ರಚನೆಯಾದ ಬಳಿಕ ಡಿ.ಕೆ. ಶಿವಕುಮಾರ್ ಮತ್ತು ಬಿ.ಎಸ್.ಯಡಿಯೂರಪ್ಪ ಕಡುವೈರಿಗಳಂತೆ ಇದ್ದರು. ಆದರೆ, ದಿಢೀರ್ ಬೆಳವಣಿಗೆಯೊಂದರಲ್ಲಿ ಉಭಯ ನಾಯಕರು ಭೇಟಿ ಮಾಡಿದ್ದು, ಹೊಸ ರಾಜಕೀಯ ಚರ್ಚೆಯನ್ನು ಹುಟ್ಟುಹಾಕಿದೆ.
ಸಮಾಧಾನ ತಂದಿದೆ: ಶಿವಕುಮಾರ್ ಬಳಿಕ ಮಾತನಾಡಿದ ಯಡಿಯೂರಪ್ಪ, ಶಿವಮೊಗ್ಗದ ಸಿಗಂದೂರು ಸೇತುವೆ ನಿರ್ಮಾಣ, ಜಿಲ್ಲೆಯ ನೀರಾವರಿ ಯೋಜನೆಗಳ ಬಗ್ಗೆ ಚರ್ಚಿಸಿದ್ದೇವೆ. ಬೇರೆ ಯಾವುದೇ ರಾಜಕೀಯ ವಿಚಾರಗಳ ಬಗ್ಗೆ ಚರ್ಚಿಸಿಲ್ಲ. ಇಂದಿನ ಮಾತುಕತೆ ಸಮಾಧಾನ ತಂದಿದೆ ಎಂದರು.
ಸಿಗಂದೂರು ಸೇತುವೆ ನಿರ್ಮಾಣದ ವಿಚಾರ ಬಹುದಿನಗಳಿಂದ ನನೆಗುದಿಗೆ ಬಿದ್ದಿತ್ತು. ಅರಣ್ಯ ಸಚಿವ ಆರ್.ಶಂಕರ್ ಅವರೂ ಸ್ಪಂದಿಸಿದ್ದಾರೆ. ನಾವು ಆಗಮಿಸುವ ವಿಚಾರ ತಿಳಿದು ಶಿವಕುಮಾರ್ ಅವರ ಅಧಿಕಾರಿಗಳನ್ನು ಕರೆಸಿದ್ದು, ಮಾತುಕತೆ ತೃಪ್ತಿ ತಂದಿದೆ ಎಂದರು.
ನಮ್ಮ ರಾಜಕೀಯ ಹೇಳಿಕೆ ಸದನಕ್ಕೆ ಸೀಮಿತ. ಎಲ್ಲ ರಾಜಕೀಯ ವಿಚಾರಗಳನ್ನು ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವಿಲ್ಲ. ಅದೆಲ್ಲ ವಿಚಾರಗಳು ಇದೀಗ ಅನಗತ್ಯ ಎಂದ ಯಡಿಯೂರಪ್ಪ, ಡಿಕೆಶಿ ಅವರನ್ನು ‘ಖಳನಾಯಕ’ ಎಂದ ತನ್ನ ಹೇಳಿಕೆಯ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು.
ಬಿಎಸ್‌ವೈ ಆತ್ಮೀಯ ಗೆಳೆಯರು: ‘ನಾನು ಯಡಿಯೂರಪ್ಪನವರು ಆತ್ಮೀಯ ಗೆಳೆಯರು. ಯಡಿಯೂರಪ್ಪನವರು ಅಧಿಕಾರದಲ್ಲಿದ್ದಾಗ ನಮಗೆ ಹಲವು ಕೆಲಸ ಮಾಡಿಕೊಟ್ಟಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ನಾವು ಯಾರೂ ರಾಜಕಾರಣ ಮಾಡುವುದಿಲ್ಲ’ ಎಂದು ಸಚಿವ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.
‘ಒತ್ತಡವಿದ್ದರೂ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳನ್ನು ಕರೆಸಿ ಸಭೆ ಮಾಡಿದ್ದೇನೆ. ಸದ್ಯದಲ್ಲೇ ಶಿವಮೊಗ್ಗ ಕ್ಷೇತ್ರಕ್ಕೂ ಹೋಗಿ ಅವರ ಆತಿಥ್ಯ ಸ್ವೀಕಾರ ಮಾಡುವೆ. ಸಿಗಂದೂರು ಸೇತುವೆ ಕಾಮಗಾರಿ ಆರಂಭಿಸುವ ಸಂಬಂಧ ತ್ವರಿತಗತಿ ಕ್ರಮ ವಹಿಸಲಾಗುವುದು’ ಎಂದು ಶಿವಕುಮಾರ್ ಹೇಳಿದರು.







