ಬಂಟ್ವಾಳ: ಜಿಲ್ಲಾ ಪಂಚಾಯತ್ ಇಂಜಿನಿಯರ್-ಗುತ್ತಿಗೆದಾರರ ವಿಶೇಷ ಸಭೆ

ಬಂಟ್ವಾಳ, ನ. 28: ಜಿಲ್ಲಾ ಪಂಚಾಯತ್ ಇಂಜಿನಿಯರ್ ಹಾಗೂ ಗುತ್ತಿಗೆದಾರರ ವಿಶೇಷ ಸಭೆಯು ಬಂಟ್ವಾಳ ತಾಲೂಕು ಪಂಚಾಯತ್‍ನ ಎಸ್‍ಜಿಆರ್ ಎಸ್‍ವೈ ಸಭಾಂಗಣದಲ್ಲಿ ಬುಧವಾರ ನಡೆಯಿತು.
ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಲಾಖೆಗೆ ಮಂಜೂರಾದ ಯೋಜನೆಗಳ ಕಾಮಗಾರಿಗಳನ್ನು ಕ್ಲಪ್ತ ಸಮಯದಲ್ಲಿ ಪೂರ್ತಿಗೊಳಿಸಬೇಕು. ಅನುದಾನಗಳು ಸಂಪೂರ್ಣ ಬಳಕೆಯಾಗಬೇಕು. ಗುಣಮಟ್ಟ ಕಾಯ್ದುಕೊಂಡು ಸಾರ್ವಜನಿಕರ ದೂರುಗಳಿಲ್ಲದೆ ಫೆ. 15 ರೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.
ಇಂಜಿನಿಯರ್ ಮತ್ತು ಗುತ್ತಿಗೆದಾರರ ನಡುವಿನ ಕೆಲವೊಂದು ಸಮಸ್ಯೆಗಳನ್ನು ಆಲಿಸಿದ ಶಾಸಕರು, ಎಲ್ಲ ಸಮಸ್ಯೆಗಳಿಗೆ ಪರಿಹಾರವಿದೆ. ಹಂತಹಂತವಾಗಿ ಬಗೆಹರಿಸಲು ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಇಂಜಿನಿಯರ್‍ಗಳ ಜೊತೆಯಲ್ಲಿ ಪಿಡಿಒಗಳು ಸ್ಪಂದಿಸುವುದಿಲ್ಲ. ಹಾಗಾಗಿ ಕಾಮಗಾರಿಯ ಸಮಯಕ್ಕೆ ಸರಿಯಾಗಿ ಮುಗಿಸಲು ಸಾಧ್ಯವಾಗುತ್ತಿಲ್ಲ ಎಂದು ಜಿಪಂ ಇಂಜಿನಿಯರ್ ನರೇಂದ್ರ ಬಾಬು ಸಭೆಯ ಗಮನಕ್ಕೆ ತಂದರು. ಮರಳು ಸಮಸ್ಯೆ, ಜಿಎಸ್‍ಟಿಯಲ್ಲಿರುವ ಗೊಂದಲ ನಿವಾರಣೆ ಇನ್ನಿತರ ವಿಷಯಗಳ ಬಗ್ಗೆ ಚರ್ಚೆ ನಡೆದವು.
ಈ ಸಂದರ್ಭದಲ್ಲಿ ತಾಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಮೀ ಸಿ.ಬಂಗೇರ ಉಪಸ್ಥಿತರಿದ್ದರು.
ಧರಣಿ
ಸಂಗಬೆಟ್ಟು ಕ್ಷೇತ್ರ ವ್ಯಾಪ್ತಿಯ ಇಂಜಿನಿಯರ್ ಜಗದೀಶ ನಿಂಬಾಲ್ಕರ್ ಅವರನ್ನು ಕನ್ಯಾನ ಕರೋಪಾಡಿಯ ವ್ಯಾಪ್ತಿಯ ಕೊಳ್ನಾಡು ಜಿಪಂ ವ್ಯಾಪ್ತಿಗೆ ವರ್ಗಾವಣೆ ಗೊಳಿಸಿ, ಅಲ್ಲಿನ ಇಂಜಿನಿಯರ್ ಅಜಿತ್ ಅವರನ್ನು ಸಂಗಬೆಟ್ಟುವಿಗೆ ವರ್ಗಾವಣೆಗೊಳಿಸಿದ್ದಕ್ಕೆ ಜಿಪಂ ಸದಸ್ಯ ತುಂಗಪ್ಪ ಬಂಗೇರ ಅವರು ಅಸಮಾಧಾನ ವ್ಯಕ್ತಪಡಿಸಿ, ಜಿಪಂ ಉಪವಿಭಾಗದ ಕಚೇರಿ ಮುಂಭಾಗದಲ್ಲಿ ಧರಣಿ ಕುಳಿತರು.
ದಿನೇಶ್ ಅಮ್ಟೂರು, ರಾಮ್‍ದಾಸ್ ಬಂಟ್ವಾಳ, ಪ್ರಕಾಶ್ ಅಂಚನ್, ಪ್ರವೀಣ್ ತುಂಬೆ, ಗೋಪಾಲ ಸುವರ್ಣ, ಸುರೇಶ್ ಕುಲಾಲ್ ಅವರು ಧರಣಿಗೆ ಸಾಥ್ ನೀಡಿದರು.