ತೋಟಬೆಂಗ್ರೆ ಸಾಮೂಹಿಕ ಅತ್ಯಾಚಾರ ಪ್ರಕರಣ: ಸರ್ವಕಾಲೇಜು ವಿದ್ಯಾರ್ಥಿ ಒಕ್ಕೂಟದಿಂದ ಮನವಿ

ಮಂಗಳೂರು, ನ.28: ನಗರದ ತೋಟಬೆಂಗ್ರೆಗೆ ವಿಹಾರಕ್ಕೆಂದು ತೆರಳಿದ್ದ ಜೋಡಿಯನ್ನು ತಡೆದು ಹಲ್ಲೆ ನಡೆಸಿ ಯುವತಿಯನ್ನು ಅಪಹರಿಸಿ ಅತ್ಯಾಚಾರ ನಡೆಸಿದ್ದು, ಸಮಾಜವು ತಲೆತಗ್ಗಿಸುವಂತಾಗಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪೊಲೀಸ್ ಉಪ ಆಯುಕ್ತರಿಗೆ ಸರ್ವ ಕಾಲೇಜು ವಿದ್ಯಾರ್ಥಿ ಒಕ್ಕೂಟದಿಂದ ಮನವಿ ಸಲ್ಲಿಸಲಾಯಿತು.
ತಡವಾಗಿ ಬೆಳಕಿಗೆ ಬಂದಿರುವ ಪ್ರಕರಣವನ್ನು ಭೇದಿಸಿದ ಪೊಲೀಸರು ಈಗಾಗಲೇ ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿರುವುದು ಸ್ವಾಗತಾರ್ಹ. ಸಮಾಜದಲ್ಲಿ ದಿನದಿಂದ ದಿನಕ್ಕೆ ಇಂತಹ ಘಟನೆಗಳು ಹೆಚ್ಚುತ್ತಿರುವುದರಿಂದ ಸಾರ್ವಜನಿಕರು ಈ ಕುರಿತು ಭಯಭೀತಗೊಂಡಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯವು ಕ್ಷಣಕ್ಷಣಕ್ಕೆ ಪ್ರಶ್ನಿಸಲ್ಪಡುತ್ತಿರುವಾಗ ಮಹಿಳೆಯರು ಹಾಗೂ ಯುವತಿಯರು ತಮ್ಮ ವೈಯುಕ್ತಿಕ ಸ್ವಾತಂತ್ರ ಹಕ್ಕನ್ನು ಕಸಿಯಲ್ಪಡುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಇದೇ ಪ್ರದೇಶದಲ್ಲಿ ಈ ಹಿಂದೆ ಮಾರ್ಚ್ ತಿಂಗಳಲ್ಲಿ ಸುತ್ತಾಡಲು ಬಂದಿದ್ದ ವಿದ್ಯಾರ್ಥಿಗಳ ಮೇಲೆ ನೈತಿಕ ಪೊಲೀಸ್‌ಗಿರಿಯು ನಡೆದಿದ್ದು, ಆ ಸಂದರ್ಭ ಆರೋಪಿಗಳ ಮೇಲೆ ವಿಧಿಸಿದ ದುರ್ಬಲ ಕಾಯ್ದೆಯಿಂದ ಈ ದುಷ್ಕರ್ಮಿಗಳಿಗೆ ಈ ಘಟನೆ ನಡೆಸಲು ಪ್ರೇರಣೆ ಆಗಿರುವ ಸಾಧ್ಯತೆಯಿದೆ. ಪ್ರವಾಸಿ ತಾಣವಾಗಿರುವ ಈ ಪ್ರದೇಶವು ರೌಡಿಗಳ, ಮಾದಕ ವ್ಯಸನಿಗಳ ಅಡ್ಡೆಯಾಗಿ ಪರಿವರ್ತನೆಯಾಗಿದೆ ಎಂದು ಮನವಿಯಲ್ಲಿ ದೂರಲಾಗಿದೆ.
ನಿಯೋಗದಲ್ಲಿ ಸರ್ವಕಾಲೇಜು ವಿದ್ಯಾರ್ಥಿ ಒಕ್ಕೂಟದ ನಗರ ಸಮಿತಿ ಉಪಾಧ್ಯಕ್ಷ ಅಬ್ದುಲ್ ಬಾಸಿತ್, ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷ ತಾಜುದ್ದೀನ್ ಮುಫೀದಾ ಮತ್ತು ವಿದ್ಯಾರ್ಥಿಗಳಾದ ಅಂಜಲಿ, ರಮ್ಯಾ, ರಾಧಾ, ಅನನ್ಯ, ಸಫ್ರೀನಾ, ಪ್ರಸಿಲ್ಲಾ ಮತ್ತು ಸುಹೈನ ಉಪಸ್ಥಿತರಿದ್ದರು.
ಪ್ರಮುಖ ಬೇಡಿಕೆಗಳು:
ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲ ಆರೋಪಿಗಳನ್ನು ಶೀಘ್ರ ಬಂಧಿಸಬೇಕು. ತೋಟಬೆಂಗ್ರೆ ಪ್ರದೇಶದಲ್ಲಿ ಪ್ರವಾಸಿಗಳಿಗೆ ತೊಂದರೆಯಾಗದಂತೆ ವಿಶೇಷ ಪೊಲೀಸ್ ಭದ್ರತೆ ಒದಗಿಸಬೇಕು. ಈ ಪ್ರದೇಶದಲ್ಲಿ ಮಾದಕ ವ್ಯಸನ ಜಾಲವು ಸಕ್ರಿಯವಾಗಿದ್ದು, ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು.