ಮಧ್ಯವರ್ತಿಗಳ ಹಾವಳಿ, ನಾಡ ಕಚೇರಿ ಮೇಲೆ ಬೆಂಗಳೂರು ನಗರ ಡಿಸಿ ದಾಳಿ: ಇಬ್ಬರು ಏಜೆಂಟ್‌ಗಳು ವಶಕ್ಕೆ
ಬೆಂಗಳೂರು, ನ.28: ಕಂದಾಯ ಇಲಾಖೆಯ ಸರಕಾರಿ ಕಚೇರಿಗಳಲ್ಲಿರುವ ಮಧ್ಯವರ್ತಿಗಳ ಹಾವಳಿಗೆ ತಡೆಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಬಿ.ಎಂ.ವಿಜಯ್ ಶಂಕರ್, ಏಕಾಏಕಿ ದಾಳಿ ನಡೆಸಿ, ಇಬ್ಬರನ್ನು ಮಧ್ಯವರ್ತಿ(ಏಜೆಂಟ್)ಗಳನ್ನು ವಶಕ್ಕೆ ಪಡೆಯಲಾಗಿದೆ.
ರಾಜಾಜಿನಗರದ ಬಿಡಿಎ ಕಾಂಪ್ಲೆಕ್ಸ್‌ನಲ್ಲಿರುವ ನಾಡ ಕಚೇರಿ ಮೇಲೆ ದಾಳಿ ನಡೆಸಲಾಗಿದ್ದು, ಮಧ್ಯವರ್ತಿಗಳಾದ ಪ್ರಕಾಶ್ ನಗರದ ಹನುಮಂತಪ್ಪ(57) ಹಾಗೂ ಉಲ್ಲಾಳ ಮುಖ್ಯರಸ್ತೆಯ ಅನ್ನಪೂರ್ಣ ಲೇಔಟ್ ನ ಎಚ್.ಕೆ.ರಾಜಣ್ಣ(49) ಎಂಬುವರನ್ನು ಗುರುತಿಸಿ ಪೊಲೀಸರ ವಶಕ್ಕೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಸಾರ್ವಜನಿಕರು ನೇರವಾಗಿ ಹೋದರೆ, ಕಂದಾಯ ಇಲಾಖೆಯಲ್ಲಿ ಕೆಲಸ ಮಾಡಿಕೊಡುವುದಿಲ್ಲ. ಮಧ್ಯವರ್ತಿಗಳ ಮೂಲಕವೇ ಹೋಗಬೇಕಿದೆ ಎಂದು ಜಿಲ್ಲಾಧಿಕಾರಿ ಅವರಿಗೆ ಹಲವರು ದೂರುಗಳು ಬಂದಿದ್ದವು ಎನ್ನಲಾಗಿದೆ. ಈ ರೀತಿಯ ದೂರುಗಳನ್ನು ಆಧರಿಸಿ ಜಿಲ್ಲಾಧಿಕಾರಿ ವಿಜಯ್ ಶಂಕರ್, ಬುಧವಾರ ನಗರದ ಕೆಲ ನಾಡ ಕಚೇರಿಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಬೇರೆ ಬೇರೆ ತಾಲೂಕುಗಳ ಗ್ರಾಮ ಲೆಕ್ಕಾಧಿಕಾರಿಗಳನ್ನು ನಾಡ ಕಚೇರಿ ಸುತ್ತ ರಹಸ್ಯವಾಗಿ ನಿಗಾ ವಹಿಸಲು ನಿಯೋಜಿಸಿದ್ದಾರೆ. ಅದನ್ನು ಆಧರಿಸಿ ತಮ್ಮ ಅಧಿಕಾರಿಗಳ ತಂಡದ ಜತೆ ದಿಢೀರ್ ದಾಳಿ ನಡೆಸಿದ್ದಾರೆ.
ಆರಂಭದಲ್ಲಿ ಕೆಜಿ ರಸ್ತೆಯಲ್ಲಿರುವ ಕಂದಾಯ ಭವನವನ್ನು ಪರಿಶೀಲಿಸಲಾಯಿತು. ಅಲ್ಲಿ ಸಾರ್ವಜನಿಕರನ್ನು ಅನಗತ್ಯವಾಗಿ ಕಾಯಿಸುತ್ತಿರುವುದು ಮತ್ತು ಕೆಲವು ಅನಪೇಕ್ಷಿತ ವ್ಯಕ್ತಿಗಳು ಕಚೇರಿಯಲ್ಲಿರುವುದು ಕಂಡು ಬಂದಿದೆ. ಅನಪೇಕ್ಷಿತ ವ್ಯಕ್ತಿಗಳಿಗೆ ಮಣೆ ಹಾಕಿ ಸಾರ್ವಜನಿಕರನ್ನು ಕಾಯಿಸುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗಳು ಕಚೇರಿಯ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು.
ಅದೇ ರೀತಿ, ರಾಜಾಜಿನಗರದ ನಾಡ ಕಚೇರಿ ಮೇಲೆ ದಾಳಿ ನಡೆಸಿದಾಗ ಮಧ್ಯವರ್ತಿಗಳಾದ ಹನುಮಂತಪ್ಪ, ಎಚ್.ಕೆ.ರಾಜಣ್ಣ ಸಿಕ್ಕಬಿದ್ದಿದ್ದು, ದಾಳಿ ವೇಳೆ ಅವರ ಕೈಯಲ್ಲಿ ಕೆಲವು ದಾಖಲೆ ಪತ್ರಗಳಿದ್ದು, ಅವು ಅವರಿಗೆ ಸಂಬಂಧಿಸಿರಲಿಲ್ಲ. ಬೇರೆಯವರಿಗೆ ಸಂಬಂಧಿಸಿದ್ದವಾಗಿದ್ದವು. ಈ ಬಗ್ಗೆ ಪ್ರಶ್ನಿಸಿದಾಗ ಮಧ್ಯವರ್ತಿಗಳು ಸಮರ್ಪಕವಾಗಿ ಉತ್ತರ ನೀಡಲು ತಡಕಾಡಿದರು. ತಕ್ಷಣವೇ ಅವರನ್ನು ಪೊಲೀಸರ ವಶಕ್ಕೆ ಒಪ್ಪಿಸಿ ಕಾನೂನು ರೀತಿಯ ಕ್ರಮ ಜರುಗಿಸಲು ಸೂಚಿಸಲಾಯಿತು.







