ಇಸ್ಲಾಮಿನಲ್ಲಿ ಆತಂಕವಾದವಿಲ್ಲ, ಆದರ್ಶವಾದವಿದೆ: ಸ್ವಾಮಿ ಲಕ್ಷ್ಮೀ ಶಂಕರಾಚಾರ್ಯ
ಮಂಗಳೂರಿನಲ್ಲಿ ಸೀರತ್ ವಿಚಾರಗೋಷ್ಠಿ

ಮಂಗಳೂರು, ನ.28: ಇಸ್ಲಾಮಿನಲ್ಲಿ ಆತಂಕವಾದ ಎಂಬುದು ಇಲ್ಲವೇ ಇಲ್ಲ. ಅಲ್ಲಿರುವುದು ಆದರ್ಶವಾದ ಎಂದು ಕಾನ್ಪುರದ ಸ್ವಾಮಿ ಲಕ್ಷ್ಮೀ ಶಂಕರಾಚಾರ್ಯ ಹೇಳಿದರು.
‘ಪ್ರವಾದಿ ಮುಹಮ್ಮದ್ (ಸ) ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ’ ಎಂಬ ವಿಷಯದಲ್ಲಿ ರಾಜ್ಯಾದ್ಯಂತ ಜರುಗುತ್ತಿರುವ ಸೀರತ್ ಅಭಿಯಾನದ ಪ್ರಯುಕ್ತ ದ.ಕ. ಜಿಲ್ಲಾ ಸ್ವಾಗತ ಸಮಿತಿಯ ವತಿಯಿಂದ ‘ಸಮಾಜದಲ್ಲಿ ಸುಧಾರಣೆ ಪ್ರವಾದಿ ಮುಹಮ್ಮದ್‌ರ ಶಿಕ್ಷಣದ ಬೆಳಕಿನಲ್ಲಿ’ ಎಂಬ ವಿಷಯದಲ್ಲಿ ಬುಧವಾರ ನಗರದ ಪುರಭವನದಲ್ಲಿ ನಡೆದ ‘ಸೀರತ್ ವಿಚಾರಗೋಷ್ಠಿ’ಯಲ್ಲಿ ಅವರು ಮುಖ್ಯ ಭಾಷಣಗೈದರು.
ಸತ್ಯ ಮತ್ತು ಅಹಿಂಸೆಯನ್ನು ಪ್ರತಿಪಾದಿಸಿದ್ದ ಪ್ರವಾದಿ ಮುಹಮ್ಮದ್ (ಸ) ಸ್ವಹಿತಾಸಕ್ತಿಗಾಗಿ ಏನನ್ನೂ ಮಾಡಿಲ್ಲ. ಅಲ್ಲಾಹನ ಪಥದಲ್ಲಿ ಸಾಗುವಂತೆ ಕರೆಕೊಟ್ಟು ಅದರಂತೆ ಮುನ್ನಡೆದಾಗ ಎದುರಾದ ಎಲ್ಲಾ ಮರ್ದನಗಳನ್ನೂ ಸಹಿಸಿಕೊಂಡಿದ್ದರು. ಅವರು ಶಾಂತಿಗಾಗಿ ಯುದ್ಧದಲ್ಲಿ ಪಾಲ್ಗೊಂಡಿದ್ದರು. ಆ ಯುದ್ಧವನ್ನು ಜಿಹಾದ್ ಎಂದು ಬಣ್ಣಿಸುವುದರಲ್ಲಿ ಅರ್ಥವಿಲ್ಲ ಎಂದು ಸ್ವಾಮಿ ಲಕ್ಷ್ಮೀ ಶಂಕರಾಚಾರ್ಯ ನುಡಿದರು.
ಕೇವಲ ನಮಾಝ್ ಮಾಡಿದರೆ ಮಾತ್ರ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂದರಾಗದು. ಸತ್ಕರ್ಮವೂ ಕೂಡಾ ಇಸ್ಲಾಮಿನ ಒಂದು ಭಾಗವಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕಿದೆ ಎಂದು ಸ್ವಾಮಿ ಲಕ್ಷ್ಮೀ ಶಂಕರಾಚಾರ್ಯ ಅಭಿಪ್ರಾಯಪಟ್ಟರು.
ಜಮಾಅತೆ ಇಸ್ಲಾಮಿ ಹಿಂದ್‌ನ ರಾಷ್ಟ್ರೀಯ ಕಾರ್ಯದರ್ಶಿ ಮೌಲಾನಾ ಮುಹಮ್ಮದ್ ಇಕ್ಬಾಲ್ ಮುಲ್ಲಾ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಸೀರತ್ ಅಭಿಯಾನ ಸ್ವಾಗತ ಸಮಿತಿಯ ಅಧ್ಯಕ್ಷ ಡಾ.ಸಿ.ಪಿ. ಹಬೀಬುರ್ರಹ್ಮಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕಾದಂಬರಿಕಾರ ಕುಂ. ವೀರಭದ್ರಪ್ಪ, ಹಿರಿಯ ಪತ್ರಕರ್ತ ಬಿ.ಎಂ. ಹನೀಫ್, ಶಾಂತಿ ಪ್ರಕಾಶನದ ಅಧ್ಯಕ್ಷ ಮುಹಮ್ಮದ್ ಅತ್ಹರುಲ್ಲಾ ಶರೀಫ್, ಮಂಗಳೂರು ವಿವಿ ಕನ್ನಡ ಪ್ರಾಧ್ಯಾಪಕ ಪ್ರೊ.ಬಿ.ಶಿವರಾಮ ಶೆಟ್ಟಿ ಮಾತನಾಡಿದರು.
ವೇದಿಕೆಯಲ್ಲಿ ಸೀರತ್ ಅಭಿಯಾನ ಸ್ವಾಗತ ಸಮಿತಿಯ ಪದಾಧಿಕಾರಿಗಳಾದ ಕೆ.ಕೆ.ಶಾಹುಲ್ ಹಮೀದ್, ಪಿ.ಬಿ. ಅಬ್ದುಲ್ ಹಮೀದ್, ಹನೀಫ್ ಗೋಳ್ತಮಜಲು, ಯಹ್ಯಾ ತಂಙಳ್, ಕೆ.ಎಂ.ಶರೀಫ್, ವೈ.ಮುಹಮ್ಮದ್ ಬ್ಯಾರಿ ಎಡಪದವು ಉಪಸ್ಥಿತರಿದ್ದರು. ಮುಹಮ್ಮದ್ ಸಲ್ಮಾನ್ ಕಿರಾಅತ್ ಪಠಿಸಿದರು. ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ವಿಚಾರ ಮಂಡಿಸಿ ಸ್ವಾಗತಿಸಿದರು. ಮುಹಮ್ಮದ್ ತುಂಬೆ ವಂದಿಸಿದರು. ಹುಸೈನ್ ಕಾಟಿಪಳ್ಳ ಮತ್ತು ಆಸಿಫ್ ಇಕ್ಬಾಲ್ ಕಾರ್ಯಕ್ರಮ ನಿರೂಪಿಸಿದರು.







