ನ.30ರಂದು ರಂಗಾಯಣ, ಉಡುಪಿ ಜಿಲ್ಲಾ ರಂಗಮಂದಿರಕ್ಕೆ ಶಿಲಾನ್ಯಾಸ
ಉಡುಪಿ, ನ.28: ಉಡುಪಿ ಜಿಲ್ಲೆಯ ಸಾಂಸ್ಕೃತಿಕ ಲೋಕದ ಬಹುದಿನಗಳ ಕನಸಾದ ಜಿಲ್ಲಾ ರಂಗಮಂದಿರ ನಿರ್ಮಾಣಕ್ಕೆ ನ.30ರಂದು ಚಾಲನೆ ದೊರಕಲಿದೆ. ಇದರೊಂದಿಗೆ ರಂಗ ಚಟುವಟಿಕೆಗಳಿಗೆ ಮುಕುಟವಾಗಿ ರಂಗಾಯಣ ಸಂಸ್ಥೆಯನ್ನು ಕೂಡಾ ರಾಜ್ಯ ಸರಕಾರ ಉಡುಪಿ ಜಿಲ್ಲೆಗೆ ಮಂಜೂರು ಗೊಳಿಸಿದ್ದು, ಇದರ ಕಾಮಗಾರಿಗೆ ಕೂಡ ನ.30ರಂದೇ ಚಾಲನೆ ದೊರಕಲಿದೆ.
ಉಡುಪಿ ನಗರದ ಆದಿಉಡುಪಿಯಲ್ಲಿ ಸುಮಾರು 1.37 ಎಕರೆ ಭೂಮಿ ಯನ್ನು ಜಿಲ್ಲಾಡಳಿತ ಇದಕ್ಕಾಗಿ ಮಂಜೂರುಗೊಳಿಸಿದೆ. ಇದರಲ್ಲಿ 87 ಸೆಂಟ್ಸ್ ಜಾಗ ದಲ್ಲಿ ಜಿಲ್ಲಾ ರಂಗಮಂದಿರ ಹಾಗೂ ಉಳಿದ 50 ಸೆಂಟ್ಸ್ ಜಾಗದಲ್ಲಿ ರಂಗಾಯಣ ಸಂಸ್ಥೆ ಅಸ್ತಿತ್ವಕ್ಕೆ ಬರಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಯೋಜನೆಯನ್ನು ಜಾರಿಗೆ ತರಲಿದೆ. ಲೋಕೋಪಯೋಗಿ ಇಲಾಖೆ ಮೂಲಕ ವಿಸ್ಕೃತವಾದ ಯೋಜನಾ ವರದಿ ತಯಾರಿಸಲಾಗುತಿದ್ದು, ಅಂದಾಜು ರೂ. 6-7 ಕೋಟಿ ರೂ. ವೆಚ್ಚದ ಯೋಜನೆ ನಿರೀಕ್ಷೆ ಇದೆ.
ಜಿಲ್ಲಾ ರಂಗಮಂದಿರದಲ್ಲಿ ಸುಮಾರು 700 ಜನರ ಆಸನ ಸಾಮರ್ಥ್ಯದ ರಂಗಮಂದಿರ ಅಸ್ತಿತ್ವಕ್ಕೆ ಬರಲಿದೆ. ಇದರಲ್ಲಿ 2 ಸುಸಜ್ಜಿತ ಗ್ರೀನ್ ರೂಂ, ಅತ್ಯಾಧುನಿಕ ಧ್ವನಿ ವ್ಯವಸ್ಥೆ, ಧ್ವನಿ ನಿಯಂತ್ರಣ ಕೇಂದ್ರ, ಪಾರ್ಕಿಂಗ್ ವ್ಯವಸ್ಥೆ ಮತ್ತಿತರ ಸೌಲ್ಯಗಳು ಇರಲಿದೆ. ಎಲ್ಲಾ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ನಡೆಸುವಷ್ಟು ಸಾಮರ್ಥ್ಯದ ರಂಗಮಂದಿರ ನಿರ್ಮಾಣವಾಗಲಿದೆ.
ರಂಗಾಯಣ: ಸಮಾಜವನ್ನು ಸಾಮಾಜಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಸದೃಢಗೊಳಿಸುವಲ್ಲಿ ರಂಗಾಯಣ ಮಹತ್ವದ ಪಾತ್ರ ವಹಿಸುತ್ತಾ ಬಂದಿದೆ. ಕರ್ನಾಟಕ ಸರಕಾರವು 1989ರಲ್ಲಿ ಮೈಸೂರಿನಲ್ಲಿ ಅಸ್ತಿತ್ವಕ್ಕೆ ತಂದ ರಂಗಾಯಣವು ಬಿ.ವಿ. ಕಾರಂತರ ಕನಸಿನ ಕೂಸು. ಮುಂದೆ ಕರ್ನಾಟಕದ ಮೂಲೆ ಮೂಲೆಗೂ ರಂಗಭೂಮಿ ಚಟುವಟಿಕೆ ವಿಸ್ತರಿಸಲು ಶಿವಮೊಗ್ಗ, ಧಾರವಾಡ ಮತ್ತು ಗುಲ್ಬರ್ಗಾದಲ್ಲಿ ರಂಗಾಯಣ ಸ್ಥಾಪಿತವಾಯಿತು. ಇದೀಗ ಉಡುಪಿ ಜಿಲ್ಲೆಯಲ್ಲೂ ರಂಗಾಯಣ ಸ್ಥಾಪನೆಗೆ ಚಾಲನೆ ಸಿಗುವುದರೊಂದಿಗೆ ರಾಜ್ಯದ ಕರಾವಳಿಯಲ್ಲೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮಹತ್ವದ ಪ್ರೋತ್ಸಾಹ ದೊರಕಿದಂತಾಗಲಿದೆ.
ರಂಗಾಯಣವು ಸಂಪೂರ್ಣ ವೃತ್ತಿನಿರತವಾಗಿರುವ ಆಧುನಿಕ ನಾಟಕ ರೆಪರ್ಟರಿ ಕಂಪೆನಿಯಾಗಿದೆ. ರಂಗಭೂಮಿಯಲ್ಲಿ ಶ್ರೇಷ್ಠತೆ ಸಾಧಿಸುವುದು, ಕರ್ನಾಟಕದ ರಂಗಭೂಮಿ ಚಳುವಳಿಯನ್ನು ಬಲಪಡಿಸುವುದು, ಸುಸಜ್ಜಿತ ರಂಗಮಾಹಿತಿ ಕೇಂದ್ರವನ್ನು ಮತ್ತು ರಂಗಪುಸ್ತಕ ಭಂಡಾರವನ್ನು ಸ್ಥಾಪಿಸುವುದು, ರಂಗಭೂಮಿ ಕುರಿತು ಸಂಶೋಧನಾ ಕೆಲಸಕ್ಕೆ ಪುಷ್ಠಿ ನೀಡಲು ಸಂಶೋಧನಾ ವೇತನ ನೀಡುವುದು, ಮಕ್ಕಳಿಗೆ, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಹಾಗೂ ರಂಗಾಸಕ್ತರಿಗೆ ಅಭಿನಯ ಹಾಗೂ ರಂಗಕಲೆಗೆ ಸಂಬಂಧಿಸಿದ ತಾಂತ್ರಿಕ ಕೆಲಸಗಳ ಕುರಿತು ಕಮ್ಮಟ, ವಿಚಾರಸಂಕಿರಣ ನಡೆಸಿ ತರಬೇತಿ ನೀಡುವುದು ರಂಗಾಯಣದ ಉದ್ದೇಶ.
ಭಾರತದ ವಿವಿಧ ಬಾಗಗಳಿಂದ ಬೋಧಕರು, ರಂಗತಜ್ಞರು ಅಭಿನಯಕಲೆ ಹಾಗೂ ರಂಗತಂತ್ರಗಳ ಕುರಿತು ತರಬೇತಿ ನೀಡಲು ಮತ್ತು ನಾಟಕ ನಿರ್ದೇಶನ ಮಾಡಲು ರಂಗಾಯಣಕ್ಕೆ ಬರಲಿದ್ದಾರೆ. ಅಭಿನಯ, ವಿನ್ಯಾಸ, ಗಾಯನ, ಜಾನಪದ, ಯೋಗ, ವಿಚಾರಮಂಥನ ಮುಂತಾದ ತರಬೇತಿಗಳನ್ನು ಇಲ್ಲಿ ನೀಡಲಾಗುವುದು.
ಕಲಾವಿದರಿಗೆ ರಂಗತರಬೇತಿ ನೀಡಲು, ರಂಗ ಚಟುವಟಿಕೆಗಳಿಗಾಗಿ ಪೂರ್ವ ಸಿದ್ಧತೆ ನಡೆಸಲು ರಂಗಾಯಣ ನಿರಂತರ ಕಾರ್ಯಕ್ರಮ ನಡೆಸಲಿದೆ. ರಂಗಾಯಣದಲ್ಲಿ ಒಬ್ಬರು ಪೂರ್ಣಪ್ರಮಾಣದ ನಿರ್ದೇಶಕರು, ಓರ್ವ ಆಡಳಿತಾಧಿಕಾರಿ ಹಾಗೂ ರಂಗ ತರಬೇತಿ ನೀಡಲು ಸಂಪನ್ಮೂಲ ವ್ಯಕ್ತಿಗಳಿರಲಿದ್ದಾರೆ. ಇಲ್ಲಿ ನಿರಂತರ ರಂಗ ಚಟುವಟಿಕೆಗಳು ನಡೆಯಲಿದ್ದು, ಖ್ಯಾತ ಕಾದಂಬರಿಗಳು ಮತ್ತು ಪ್ರಶಸ್ತಿ ವಿಜೇತ ಸಾಹಿತ್ಯ ಕೃತಿಗಳ ನಾಟಕಗಳಿಗೆ ಕಲಾವಿದರಿಗೆ ತರಬೇತಿ ನೀಡಿ, ಪ್ರದರ್ಶನಗೊಳ್ಳಲಿದೆ. ವಿವಿಧ ರಂಗ ತರಬೇತಿ ಗಳಿಗೆ ಕಲಾವಿದರ ಆಯ್ಕೆಯಾಗಿ ಪ್ರತಿಭಾವಂತ ಕಲಾವಿದರಿಗೆ ಅವಕಾಶ ಸಿಗಲಿದೆ.
ಉಡುಪಿ ಜಿಲ್ಲೆಯ ಕಲಾಸಕ್ತರಿಗೆ ಇದೊಂದು ಮಹತ್ವದ ಯೋಜನೆಯಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರೂ ಆದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲ ಅವರು ಉಡುಪಿ ಜಿಲ್ಲೆಗೆ ನೀಡುತ್ತಿರುವ ಮಹತ್ವದ ಕೊಡುಗೆಯಾಗಲಿದೆ. ನ.30ರಂದು ಬೆಳಿಗ್ಗೆ 10 ಗಂಟೆಗೆ ಉಡುಪಿ ಎಪಿಎಂಸಿ ಯಾರ್ಡ್ ಬಳಿ ಸಚಿವರು ಜಿಲ್ಲಾ ರಂಗಮಂದಿರ ಹಾಗೂ ರಂಗಾಯಣ ಯೋಜನೆಯ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.