ನಿವೃತ್ತ ನ್ಯಾಯಮೂರ್ತಿ ಹೆಚ್.ಎಲ್.ದತ್ತುಗೆ ರಾಜ್ಯೋತ್ಸವ ಪ್ರಶಸ್ತಿ

ಚಿಕ್ಕಮಗಳೂರು,ನ.28: ರಾಜ್ಯ ಸರಕಾರ ಪ್ರಕಟಿಸಿದ 2018ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಜಿಲ್ಲೆಯವರೇ ಆದ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಹೆಚ್.ಎಲ್.ದತ್ತು ಆಯ್ಕೆಯಾಗಿದ್ದಾರೆ.
ಜಿಲ್ಲೆಯ ಕಡೂರು ತಾಲೂಕಿನ ಚಿಕ್ಕಪಟ್ಟಣಗೆರೆ ಗ್ರಾಮದಲ್ಲಿ ಜನಿಸಿದ ಅವರು, ಕಡೂರು, ತರೀಕೆರೆ ಹಾಗೂ ಬೀರೂರಿನಲ್ಲಿ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ್ದರು.
ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರಿಗೆ ತೆರಳಿದ ದತ್ತು, ಎಲ್.ಎಲ್.ಬಿ. ಪೂರ್ಣಗೊಳಿಸಿದ ನಂತರ 1975ರಿಂದ ವಕೀಲ ವತ್ತಿ ಆರಂಭಿಸಿದ್ದರು.
1995ರಲ್ಲಿ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ನೇಮಕಗೊಂಡ ಅವರು 2008ರವರೆಗೆ ಅಲ್ಲಿಯೇ ಕಾರ್ಯನಿರ್ವಹಿಸಿದರು. ನಂತರ ಛತ್ತೀಸ್‌ಘಡ ಹಾಗೂ ಕೇರಳದಲ್ಲಿಯೂ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ಕರ್ತವ್ಯ ನಿರ್ವಹಿಸಿದ್ದರು.
ಆ ನಂತರ 2008ರ ಡಿಸೆಂಬರ್ 17 ರಿಂದ 2014ರ ಸೆಪ್ಟೆಂಬರ್ 27ರವರೆಗೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ಕರ್ತವ್ಯ ನಿರ್ವಹಿಸಿದರು. ಅಂತಿಮವಾಗಿ 2014ರ ಸೆಪ್ಟೆಂಬರ್ 28 ರಂದು ದೇಶದ ಸರ್ವೋಚ್ಚ ನ್ಯಾಯಾಲಯದ 42ನೇ ಮುಖ್ಯನ್ಯಾಯಮೂರ್ತಿಗಳಾಗಿ ನೇಮಕಗೊಂಡ ಅವರು 2015ರ ಡಿಸೆಂಬರ್ 2 ರವರೆಗೆ ಮುಖ್ಯನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದರು.





