ಶಾಲಾ ಬಾಲಕರಿಗೆ ಲೈಂಗಿಕ ದೌರ್ಜನ್ಯ: ಪೋಕ್ಸೊ ಕಾಯಿದೆಯಡಿ ಪತ್ರಕರ್ತನ ಬಂಧನ

ಕುಂದಾಪುರ, ನ.28: ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಗಳಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿಯಲ್ಲಿ ಕುಂದಾಪುರದ ಪತ್ರಕರ್ತನೊಬ್ಬನನ್ನು ಬೈಂದೂರು ಪೊಲೀಸರು ಪೋಕ್ಸೊ ಕಾಯಿದೆಯಡಿ ಬುಧವಾರ ಬಂಧಿಸಿದ್ದಾರೆ.
ಕುಂದಾಪುರ ಸಮೀಪದ ಹೆಮ್ಮಾಡಿ ನಿವಾಸಿ ಚಂದ್ರ ಕೆ.ಹೆಮ್ಮಾಡಿ (40) ಬಂಧಿತ ಆರೋಪಿ.
ಈತ ಸುದ್ದಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಯೊಬ್ಬನನ್ನು ದಾರಿ ತೋರಿಸುವ ನೆಪದಲ್ಲಿ ಹಾಡಿಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎನ್ನಲಾಗಿದೆ. ದೌರ್ಜನ್ಯಕ್ಕೆ ಒಳಗಾದ ಬಾಲಕ ಮನೆಯವರಲ್ಲಿ ತಿಳಿಸಿದಾಗ ಈ ಪ್ರಕರಣ ಬೆಳಕಿಗೆ ಬಂತೆನ್ನಲಾಗಿದೆ. ಬಾಲಕನ ತಂದೆ ನೀಡಿದ ದೂರಿನಂತೆ ಬೈಂದೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
5-6 ವರ್ಷಗಳಿಂದ ಈ ರೀತಿಯ ಚಟ ಹೊಂದಿದ್ದ ಈತ 10ಕ್ಕೂ ಅಧಿಕ ಅಪ್ರಾಪ್ತ ವಯಸ್ಸಿನ ಬಾಲಕರ ಮೇಲೆ ದೌರ್ಜನ್ಯ ಎಸಗಿದ್ದ ಎಂದು ತನಿಖೆ ಯಿಂದ ತಿಳಿದುಬಂದಿದೆ. ಕಳೆದ ಹಲವು ವರ್ಷಗಳಿಂದ ಕುಂದಾಪುರದ ಹೆಮ್ಮಾಡಿಯಲ್ಲಿ ದಿನ ಪತ್ರಿಕೆಯೊಂದರಲ್ಲಿ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿರುವ ಈತನಿಗೆ ಎರಡೂವರೆ ವರ್ಷಗಳ ಹಿಂದೆ ಮದುವೆಯಾಗಿದ್ದು, ಒಂದು ಮಗು ಇದೆ.
ದೌರ್ಜನ್ಯಕ್ಕೆ ಒಳಗಾದ ಇನ್ನಷ್ಟು ವಿದ್ಯಾರ್ಥಿಗಳನ್ನು ಗುರುತಿಸಿ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರು ಪಡಿಸಿ ಆಪ್ತ ಸಮಾಲೋಚನೆ ಮಾಡಿ ಆರೋಪಿ ವಿರುದ್ಧ ಇನ್ನಷ್ಟು ದೂರುಗಳನ್ನು ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಇಂದು ರಾತ್ರಿ ಇಲ್ಲವೇ ನಾಳೆ ಬೆಳಗ್ಗೆ ಉಡುಪಿ ನ್ಯಾಯಾಲಯದ ಮುಂದೆ ಪೊಲೀಸರು ಹಾಜರುಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.