ಮರಳು ಸಮಸ್ಯೆ: ಗ್ರಾಪಂಗಳಿಗೆ ಕಟ್ಟಡ ಕಾರ್ಮಿಕರಿಂದ ಮನವಿ

ಕುಂದಾಪುರ, ನ.28: ಕುಂದಾಪುರ ತಾಲೂಕಿನ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆಗೆ ಅವಕಾಶ ನೀಡದ ಕ್ರಮವನ್ನು ಖಂಡಿಸಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಮನ್ವಯ ಸಮಿತಿ ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರು ಇಂದು ಕುಂದಾಪುರದ ವಿವಿಧ ಗ್ರಾಪಂಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಗಂಗೊಳ್ಳಿ ಕಟ್ಟಡ ಕಾರ್ಮಿಕರು ರಾಮಮಂದಿರ ಬಳಿಯಿಂದ ಮೆರವಣಿಗೆ ಹೊರಟು ಗಂಗೊಳ್ಳಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಾಧವ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷ ಚಿಕ್ಕಮೊಗವೀರ, ಕಾರ್ಯ ದರ್ಶಿ ಅರುಣ್ ಕುಮಾರ್ ಗಂಗೊಳ್ಳಿ ಉಪಸ್ಥಿತರಿದ್ದರು.
ಗುಜ್ಜಾಡಿ ಕಟ್ಟಡ ಕಾರ್ಮಿಕರು ಮರಳು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಆಗ್ರಹಿಸಿ ರಾಮಮಂದಿರದಿಂದ ಮೆರವಣಿಗೆ ಹೊರಟು ಗುಜ್ಜಾಡಿ ಗ್ರಾಪಂಗೆ ಮನವಿ ಸಲ್ಲಿಸಿದರು. ಈ ವೇಳೆ ತಾಲೂಕು ಸಂಘದ ಉಪಾಧ್ಯಕ್ಷ ಶ್ರೀನಿವಾಸ ಪೂಜಾರಿ, ಘಟಕ ಅಧ್ಯಕ್ಷ ತಿಮ್ಮಪ್ಪ, ಕಾರ್ಯದರ್ಶಿ ಶೀನ ಹಾಜರಿದ್ದರು.
ಅದೇ ರೀತಿ ಹೊಸಂಗಡಿ, ಆಜ್ರಿ, ಕರ್ಕುಂಜೆ, ಕಿರಿಮಂಜೇಶ್ವರ, ಗುಲ್ವಾಡಿ, ಸಿದ್ದಾಪುರ, ಹೇರೂರು, ಕುಂದಬಾರಂದಾಡಿ, ಅಂಪಾರು, ಮರವಂತೆ, ಕೋಟೇಶ್ವರ, ತಲ್ಲೂರು, ನೇರಳಕಟ್ಟೆ, ಅಮಾಸೆಬೈಲು, ನಾಡ, ಬೈಂದೂರು ಯಡ್ತರೆ ಸೇರಿದಂತೆ ವಿವಿಧ ಗ್ರಾಪಂಗಳಿಗೆ ಕಾರ್ಮಿಕರು ಅಧ್ಯಕ್ಷರು ಹಾಗೂ ಪಿಡಿಓ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿ ಸರಕಾರ ಕೂಡಲೇ ಮಧ್ಯಪ್ರವೇಶಿಸಿ ಪರಿಸರ ಇಲಾಖೆಯಲ್ಲಿರುವ ತೊಡಕುಗಳನ್ನು ಬಗೆಹರಿಸಲು ಕ್ರಮವಹಿಸ ಬೇಕೆಂದು ಒತ್ತಾಯಿಸಿದರು.
ಕೇಂದ್ರ ಸರಕಾರದಡಿಯಲ್ಲಿರುವ ಪರಿಸರ ಇಲಾಖೆಯ ನಿಯಮದಂತೆ ಕುಂದಾಪುರದ ಹಲವು ನದಿಗಳು ಜೈವಿಕ ಸೂಕ್ಷ್ಮವಲಯ ಎಂದು ಗುರುತಿಸಿ ರುವುದು ಕಾರ್ಮಿಕರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದ್ದು ಜಿಲ್ಲೆಯ ಸಂಸದರು ಕೇಂದ್ರ ಸರಕಾರದ ಗಮನಕ್ಕೆ ತಂದು ಈ ಸಮಸ್ಯೆ ಪರಿಹರಿಸಬೇಕು. ಇಲ್ಲವಾದಲ್ಲಿ ಸರಕಾರದ ವಿರುದ್ದ ಗ್ರಾಮ ಗ್ರಾಮಗಳಲ್ಲಿ ಹೋರಾಟಗಳನ್ನು ನಡೆಸಲಾಗುವುದು ಎಂದು ಉಡುಪಿ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಮನ್ವಯ ಸಮಿತಿ ತಿಳಿಸಿದೆ.