ಬೆಳ್ತಂಗಡಿ: ಡಿ. ಸುರೇಂದ್ರ ಕುಮಾರ್, ಅಣ್ಣುದೇವಾಡಿಗರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ಡಿ. ಸುರೇಂದ್ರ ಕುಮಾರ್ - ಅಣ್ಣುದೇವಾಡಿಗ
ಬೆಳ್ತಂಗಡಿ, ನ. 28: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಧೇಶ್ವರ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್ ಹಾಗು ಹಿರಿಯ ನಾಗಸ್ವರ ವಾದಕ ಅಣ್ಣುದೇವಾಡಿಗರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಡಿ. ಸುರೇಂದ್ರ ಕುಮಾರ್
ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಧೇಶ್ವರ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ, ಭಾರತೀಯ ಜೈನ್ ಮಿಲನ್ನ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಡಿ. ಸುರೇಂದ್ರ ಕುಮಾರ್ ಅವರು 1951ರಲ್ಲಿ ಜನಿಸಿದರು. ಇವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದಿ ಯೋಜನೆಯ ಟ್ರಸ್ಟಿಯಾಗಿ, ಧರ್ಮಸ್ಥಳದ ವಿವಿಧ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೆ ವಿವಿಧ ಸಂಘಸಂಸ್ಥೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಸುರೇಂದ್ರ ಕುಮಾರ್ ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿಯೂ ಸಕ್ರಿಯರಾಗಿದ್ದಾರೆ. ಅವರು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಕಿರಿಯ ಸಹೋದರರಾಗಿದ್ದಾರೆ.
ಅಣ್ಣುದೇವಾಡಿಗ
ಹಿರಿಯ ನಾಗಸ್ವರ ವಾದಕ ಅಣ್ಣುದೇವಾಡಿಗ ಧರ್ಮಸ್ಥಳ ಅವರು ಕಲೆಗಾಗಿ ತನ್ನ ಬದುಕನ್ನು ಮುಡಿಪಾಗಿಟ್ಟವರು, ಏಳನೇ ತರಗತಿಯ ಶಿಕ್ಷಣ ಮಾತ್ರ ಪಡೆದಿರುವ ಇವರು ತನ್ನ ಒಂಬತ್ತನೇ ವಯಸ್ಸಿನಲ್ಲಿಯೇ ನಾಗಸ್ವರ ಕಲಿಕೆಯನ್ನು ಆರಂಭಿಸಿದರು.
ಟಿ.ಎನ್ ಗೋವಿಂದರಾಜ್ ಪಿಳೈ ಅವರ ಬಳಿ ನಾಗಸ್ವರ ಕಲಿಕೆಯನ್ನು ಆರಂಬಿಸಿದ ಅವರು ಆಕಾಶವಾಣಿ, ದೂರದರ್ಶನಗಳಲ್ಲಿ ಹಲವಾರು ಕಾರ್ಯಕ್ರಮ ಗಳನ್ನು ನೀಡಿದ್ದಾರೆ. 2011ರಲ್ಲಿ ಇವರಿಗೆ ನೃತ್ಯ ಅಕಾಡಮಿಯ ಪ್ರಶಸ್ತಿಯೂ ಲಭಿಸಿದೆ. ಪತ್ನಿ ಹಾಗೂ ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯಿದ್ದಾರೆ.