ಕೋಮು ಸೌಹಾರ್ದದ ನೆಲೆಗಳನ್ನು ಬಿಂಬಿಸುವ ಬರಹಗಳ ಅನುವಾದಕ ಹಸನ್ ನಯೀಂ ಸುರಕೋಡ
2018ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ

ಬೆಂಗಳೂರು,ನ.28: ರಾಜ್ಯ ಸರಕಾರ ಪ್ರಕಟಿಸಿದ 2018ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಸಾಹಿತ್ಯ ಕ್ಷೇತ್ರದಲ್ಲಿ ಹಸನ್ ನಯೀಂ ಸುರಕೋಡ ಆಯ್ಕೆಯಾಗಿದ್ದಾರೆ.
ಹಸನ್ ನಯೀಂ ಸುರಕೋಡ ಬೆಳಗಾವಿ ಜಿಲ್ಲೆಯ ರಾಮದುರ್ಗದವರು. ಎಂ.ಎ.ಅರ್ಥಶಾಸ್ತ್ರ ಪದವೀಧರರು. ಇಂಗ್ಲಿಷ್, ಉರ್ದು, ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ಪರಿಣಿತರಾದ ಅವರು ಸಮಾಜವಾದಿ ಚಿಂತನೆಗಳನ್ನು ಕನ್ನಡಕ್ಕೆ ತಂದವರು. ಈ ನಿಟ್ಟಿನಲ್ಲಿ ರಾಮಮನೋಹರ ಲೋಹಿಯಾ, ಕಿಶನ್ ಪಟ್ನಾಯಕ್, ಮಧುಲಿಮಯೆ ಮುಂತಾದವರ ಬರಹಗಳನ್ನು ಅನುವಾದಿಸಿದ್ದಾರೆ.
ಕೋಮು ಸೌಹಾರ್ದದ ನೆಲೆಗಳನ್ನು ಬಿಂಬಿಸುವ ಹಲವಾರು ಬರಹಗಳು ಇವರಿಂದ ಕನ್ನಡಕ್ಕೆ ಅನುವಾದಿತವಾಗಿವೆ. ಉರ್ದು ಭಾಷೆಯ ಮಹಾಕವಿ ಫೈಝ್ ಅಹಮದ್ ಫೈಝ್ ಅವರ ಕಾವ್ಯ ಮತ್ತು ಬದುಕು, ಸಾದತ್ ಹಸನ್ ಮಂಟೋ ಅವರ ಕಥನ ಕೃತಿಗಳು, ಅಮೃತಾ ಪ್ರೀತಂ ಅವರ ಆತ್ಮಕತೆ ಹಾಗೂ ಅಸ್ಗರ್ ಅಲಿ ಇಂಜಿನಿಯರ್ ಅವರ ವೈಚಾರಿಕ ಬರಹಗಳನ್ನು ಅನುವಾದಿಸಿದ್ದಾರೆ.
ಉರ್ದುವಿನ ಕ್ರಾಂತಿಕಾರಿ ಕವಿ ಸಾಹಿರ್ ಲುಧಿಯಾನವಿ ಅವರ ಜೀವನ ಮತ್ತು ಕಾವ್ಯ ಕುರಿತ ‘ಪ್ರೇಮ ಲೋಕದ ಮಾಯಾವಿ’ ಇವರ ವಿಶಿಷ್ಟ ಕೃತಿ. 20ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಇವರಿಗೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಗೌರವ ಪ್ರಶಸ್ತಿ ಸೇರಿದಂತೆ ಕೇಂದ್ರ ಸಾಹಿತ್ಯ ಅಕಾಡೆಮಿ, ಪ್ರೊ.ಕೆ.ಈ.ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿವೆ.
ಜೊತೆಗೆ, ಬಿ.ಎ.ಸನದಿ ಸಾಂಸ್ಕೃತಿಕ ಪ್ರತಿಷ್ಠಾನದ ‘ಕನ್ನಡ ಗಡಿ ತಿಲಕ’, ಶ್ರೀಮತಿ ಚಂದ್ರಮ್ಮ ನೀರಾವರಿ ಸ್ಮಾರಕ ಪ್ರಶಸ್ತಿ, ಶ್ರೀ ಕಾಗೋಡು ತಿಮ್ಮಪ್ಪ ಪ್ರಶಸ್ತಿ ಮುಂತಾದ ಪ್ರಶಸ್ತಿ ಪುರಸ್ಕಾರಗಳು ಇವರಿಗೆ ಸಂದಿವೆ.







