ತೋಟಬೆಂಗ್ರೆ ಸಾಮೂಹಿಕ ಅತ್ಯಾಚಾರ ಪ್ರಕರಣ: ಮತ್ತೆ ಮೂವರು ಅಪ್ರಾಪ್ತರ ಬಂಧನ

ಮಂಗಳೂರು, ನ.28: ನಗರದ ಹೊರವಲಯ ತೋಟಬೆಂಗ್ರೆಯಲ್ಲಿ ಇತ್ತೀಚೆಗೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಅಪ್ರಾಪ್ತ (ಕಾನೂನಿನೊಂದಿಗೆ ಸಂಘರ್ಷಕ್ಕಿಳಿದ ಬಾಲಕರು)ರನ್ನು ನಗರ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ನ. 27ರಂದು ಸಂಜೆ ಬಂಧಿಸಲಾಗಿತ್ತು.
ತಲೆಮರೆಸಿಕೊಂಡಿದ್ದ ಇನ್ನುಳಿದ ಮೂವರು ಆರೋಪಿಗಳ ಪತ್ತೆಗಾಗಿ ಪಣಂಬೂರು ಇನ್‌ಸ್ಪೆಕ್ಟರ್ ರಫೀಕ್ ಕೆ.ಎಂ. ಮತ್ತು ಮಂಗಳೂರು ಉತ್ತರ ಉಪ-ವಿಭಾಗದ ರೌಡಿ ನಿಗ್ರಹ ದಳದ ವಿಶೇಷ ತಂಡದಿಂದ ಪತ್ತೆ ಕಾರ್ಯ ಮುಂದುವರಿದಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಪ್ರಾಪ್ತರನ್ನು ವಶಕ್ಕೆ ಪಡೆದುಕೊಂಡು ಬಾಲ ನ್ಯಾಯ ಮಂಡಳಿ ಎದುರು ಹಾಜರುಪಡಿಸಲಾಗಿದೆ.
ಈ ಪ್ರಕರಣದ ಪತ್ತೆ ಕಾರ್ಯವು ಮಂಗಳೂರು ಸಂಚಾರ ಉಪ-ವಿಭಾಗ ಸಹಾಯಕ ಪೊಲೀಸ್ ಆಯುಕ್ತ ಮಂಜುನಾಥ ಶೆಟ್ಟಿ ನೇತೃತ್ವದಲ್ಲಿ ಪಣಂಬೂರು ಠಾಣೆ ಪೊಲೀಸ್ ನಿರೀಕ್ಷಕ ರಫೀಕ್ ಕೆ.ಎಂ., ಮಂಗಳೂರು ಮಹಿಳಾ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಕಲಾವತಿ, ಪಣಂಬೂರು ಠಾಣೆ ಪಿಎಸ್ಸೈ ಉಮೇಶ್ ಕುಮಾರ್ ಎಂ.ಎನ್. ಹಾಗೂ ಮಂಗಳೂರು ನಗರ ಉತ್ತರ ಉಪ-ವಿಭಾಗ ರೌಡಿ ನಿಗ್ರಹ ದಳದ ಅಧಿಕಾರಿ/ ಸಿಬ್ಬಂದಿ ಎಎಸ್ಸೈ ಮುಹಮ್ಮದ್, ಕುಶಲ ಮಣಿಯಾಣಿ, ವಿಜಯ ಕಾಂಚನ್, ಸತೀಶ್.ಎಂ, ಶರಣ್ ಕಾಳಿ, ಠಾಣಾ ಗುಪ್ತವಾರ್ತಾ ಸಿಬ್ಬಂದಿ ಚಂದ್ರಹಾಸ ಆಳ್ವ ಮತ್ತು ಪಣಂಬೂರು ಪೊಲೀಸ್ ಠಾಣೆ ಅಧಿಕಾರಿ, ಸಿಬ್ಬಂದಿ ಪಾಲ್ಗೊಂಡಿದ್ದರು.