ಬೆಳ್ತಂಗಡಿ: ಡಿ.1ರಂದು ಜಿಲ್ಲಾ ಸಮ್ಮೇಳನ, ಮೀಲಾದ್ ಕಾನ್ಫರೆನ್ಸ್
ಬೆಳ್ತಂಗಡಿ, ನ. 28: ಸುನ್ನೀ ಮೆನೇಜ್‍ಮೆಂಟ್ ಅಸೋಸಿಯೇಶನ್ ಎಸ್‍ಎಮ್‍ಎ ಪುತ್ತೂರು ಜಿಲ್ಲಾ ಸಮಿತಿ ವತಿಯಿಂದ ಡಿ. 1ರಂದು ಬೆಳ್ತಂಗಡಿ ತಾಲೂಕು ಮೈದಾನದಲ್ಲಿ ಜಿಲ್ಲಾ ಸಮ್ಮೇಳನ ಹಾಗೂ ಮೀಲಾದ್ ಕಾನ್ಫರೆನ್ಸ್ ನಡೆಯಲಿದೆ ಎಂದು ಸ್ವಾಗತ ಸಮಿತಿ ಚೆಯರ್ಮಾನ ಅಹಮ್ಮದ್ ಎ.ಕೆ ತಿಳಿಸಿದ್ದಾರೆ.
ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಅವರು ಈ ವಿಚಾರ ತಿಳಿಸಿದರು, ಅಪರಾಹನ್ನ 3.30 ಕ್ಕೆ ಮೀಲಾದ್ ಸ್ನೇಹ ಕೂಟ ನಡೆಯಲಿದ್ದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ರಾಜ್ಯ ಸರಕಾರದ ವಕ್ಫ್ ಸಚಿವರಾದ ಝಮೀರ್ ಅಹ್ಮದ್, ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ ಖಾದರ್, ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಬಿಷಪ್ ಲಾರೆನ್ಸ್ ಮುಕ್ಕುಯಿ, ಎನ್.ಕೆ.ಎಮ್ ಶಾಫಿ ಸಅದಿ ವಿಧನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಶಾಸಕ ವಸಂತ ಬಂಗೇರ ಹಾಗೂ ಇತರೆ ಗಣ್ಯರು ಭಾಗವಹಿಸಲಿದ್ದಾರೆ.
ಸಂಜೆ ನಡೆಯುವ ಮೀಲಾದ್ ಕಾನ್ಫರೆನ್ಸ್‍ನಲ್ಲಿ ಕೇರಳ ರಾಜ್ಯ ಸರಕಾರದ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರು ಮುಳ್ಳೂರುಕೆರೆ ಮುಹಮ್ಮದಲಿ ಸಖಾಫಿ ಮುಖ್ಯಪ್ರಭಾಷಣ ನಡೆಸಲಿದ್ದಾರೆ. ಕೇರಳ ರಾಜ್ಯ ಕೆಎಮ್‍ಜೆಸಿ ಪ್ರಧಾನ ಕಾರ್ಯದರ್ಶಿ ಸಯ್ಯಿದ್ ಕಡಲುಂಡಿ ತಂಙಳ್, ದ. ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಸಯ್ಯಿದ್ ಕೂರತ್ ತಂಙಳ್ ಸಹಿತ ಸಯ್ಯಿದರುಗಳು ಭಾಗಿಯಾಗಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‍ಎಮ್‍ಎ ರಾಜ್ಯಾಧ್ಯಕ್ಷ ಸಯ್ಯಿದ್ ಮಲ್‍ಜಅ ಉಜಿರೆ ತಂಙಳ್ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪುತ್ತೂರು ವಿಭಾಗದ ವಿವಿಧ ಪ್ರದೇಶಗಳಿಂದ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ. ಅಪಾರಾಹ್ನ 2. 30ಕ್ಕೆ ಮದರಸ ಮಕ್ಕಳಿಂದ ಸಂತೆಕಟ್ಟೆಯಿಂದ ಮೈದಾನದವರೆಗೆ ಆಕರ್ಷಕ ರ್ಯಾಲಿ ನಡೆಯಲಿದೆ ಎಂದು ತಿಳಿಸಿದರು.
ಎಸ್‍ಎಮ್‍ಎ ಪುತ್ತೂರು ಜಿಲ್ಲಾ ವ್ಯಾಪ್ತಿಯಲ್ಲಿ ಬೆಳ್ತಂಗಡಿ, ಪುತ್ತೂರು, ಸುಳ್ಯ ತಾಲೂಕುಗಳು ಮತ್ತು ಬಂಟ್ವಾಳ ತಾಲೂಕಿನ ಅರ್ಧಕ್ಕಿಂತ ಹೆಚ್ಚು ಭಾಗ ಒಳಗೊಂಡಿದ್ದು, 234 ಅರೆಬಿಕ್ ಮದರಸಗಳು, ಸುಮಾರು 14 ಸಾವಿರಕ್ಕೂ ಮಿಕ್ಕಿದ ವಿದ್ಯಾರ್ಥಿಗಳು, 1500 ಮಂದಿ ಧಾರ್ಮಿಕ ಗುರುಗಳು ತೊಡಗಿಸಿಕೊಂಡು ಧಾರ್ಮಿಕ ವಿಧ್ಯಾಭ್ಯಾಸ ವಿಸ್ತಾರ ಕಾರ್ಯ ನಡೆಯುತ್ತಿದೆ. ಇಸ್ಲಾಂನ ಮೂಲಭೂತ ಶಕ್ತಿಯಾಗಿರುವ ಮೊಹಲ್ಲಾಗಳ ಸಬಲೀಕರಣ, ಮಕ್ಕಳಿಗೆ ಎಳವೆ ಪ್ರಾಯದಲ್ಲೇ ನೈತಿಕ ಜಾಗೃತಿ ಮತ್ತು ದೇಶಾಭಿಮಾನ ಹುಟ್ಟುಹಾಕುವ ಶಿಕ್ಷಣ ಒದಗಿಸುವುದು, ಮೂಲಭೂತ ಸೌಲಭ್ಯಗಳಿಂದ ಹಿಂದುಳಿದ ಮದರಸಗಳ ಅಭಿವೃದ್ಧಿಗೆ ಆರ್ಥಿಕ ಸಹಕಾರ, ಮದರಸಗಳಲ್ಲಿ ಬೋಧಿಸುವ ಗುರುಗಳಿಗೆ ಮನೆ ನಿರ್ಮಾಣ, ಇತ್ಯಾಧಿ ಸಂಕಷ್ಟಗಳಿಗೆ ನೆರವು ನೀಡುವುದು ಮೊದಲಾದ ಉದ್ಧೇಶದಿಂದ ಈಗಾಗಲೇ ಎಸ್‍ಎಮ್‍ಎ ರಾಜ್ಯಾಧ್ಯಂತ ಕಾರ್ಯನಿರ್ವಹಿಸುತ್ತಿದೆ. ಅತೀ ಮುಖ್ಯವಾಗಿ ಮದರಸ ವ್ಯವಸ್ಥೆ ಬಗ್ಗೆ ಜನ ಸಾಮಾನ್ಯರಲ್ಲಿರುವ ತಪ್ಪುಕಲ್ಪನೆ ಹೋಗಲಾಡಿಸಿ, ವ್ಯವಸ್ಥೆಯನ್ನು ಅವಹೇಳಿಸುವವರ ವಿರುದ್ಧ ಧ್ವನಿ ಎತ್ತುವುದು ಮತ್ತು ಕಾನೂನು ಸಂಬಂಧಿ ಹೋರಾಟ ಗಳನ್ನು ನಡೆಸುವ ಕಾರ್ಯವನ್ನೂ ಈ ಸಂಘಟನೆ ಮಾಡುತ್ತಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಎಸ್‍ಎಮ್‍ಎ ರಾಜ್ಯ ಕಾರ್ಯದರ್ಶಿ ಸ್ವಾದಿಕ್ ಮಾಸ್ಟರ್, ಕೋಶಾಧಿಕಾರಿ ಎಂ.ಕೆ ಬದ್ರುದ್ದೀನ್ ಪರಪ್ಪು, ಕನ್ವೀನರ್ ಅಶ್ರಫ್ ಸಖಾಫಿ ಮಾಡಾವು, ಜಿಲ್ಲಾ ಕಾರ್ಯದರ್ಶಿ ಇಬ್ರಾಹಿಂ ಸಖಾಫಿ ಮುಂಡಾಜೆ, ವಲಯ ಕಾರ್ಯದರ್ಶಿ ಅಶ್ರಫ್ ಹಿಮಮಿ ಉಜಿರೆ, ಉಪಸ್ಥಿತರಿದ್ದರು.