ಉಡುಪಿ: ದಾನಶೂರ, ಸಮಾಜ ಸೇವಕನಿಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ

ಉಡುಪಿ, ನ.28: ಕೋಟ ಎಂಬ ಊರು ಡಾ. ಕೋಟ ಶಿವರಾಮ ಕಾರಂತರಿಂದಾಗಿ ಜಗತ್ಪ್ರಸಿದ್ಧವಾದರೆ, ಈ ಊರಿನ ಹೆಸರನ್ನು ತಮ್ಮ ಸಮಾಜ ಮುಖಿ ಕಾರ್ಯ, ಪರಿಸರದ ಕುರಿತ ಕಾಳಜಿಯಿಂದ ಎಲ್ಲಡೆ ಪಸರಿಸುತ್ತಿರುವವರು ಇಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಆನಂದ ಸಿ.ಕುಂದರ್.
ಕೋಟ ಪರಿಸರದಲ್ಲಿ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡು, ದಾನ ಧರ್ಮಗಳ ಮೂಲಕ ಮನೆ ಮಾತಾಗಿರುವ ಕೋಟದ ಜನತಾ ಫಿಶ್ ಮೀಲ್‌ನ ಮಾಲಕರು ಹಾಗೂ ತನ್ನ ಸಮಾಜಮುಖಿ ಕಾರ್ಯಗಳಿಗೆ ಸ್ಥಾಪಿಸಿದ ಗೀತಾನಂದ ಪೌಂಡೇಶನ್‌ನ ಪ್ರವರ್ತಕರು ಆಗಿರುವರು ಆನಂದ್ ಸಿ ಕುಂದರ್.
ಆರಂಭದಿಂದಲೂ ಉದ್ಯಮ ಕ್ಷೇತ್ರದಲ್ಲಿ ತನ್ನನ್ನು ಗುರುತಿಸಿಕೊಂಡ ಆನಂದ ಸಿ.ಕುಂದರ್, ತನ್ನದೆ ಆದ ಸಾಧನೆಯ ಮೈಲ್ಲುಗಲ್ಲು ಸಾಧಿಸಿದವರು. ಉದ್ಯಮದಲ್ಲಿ ಬಂದ ಲಾಭವನ್ನು ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಿಗೆ ವಿನಿಯೋಗಿಸುತ್ತಿರುವ ಇವರು, ಪರಿಸರದ ಹತ್ತು ಹಲವು ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಮುಂಚೂಣಿಯಲ್ಲಿ ನಿಂತು ಸಹಾಯ ಮಾಡಿದವರು. ಇದರಿಂದ ಕೋಟದ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನ, ಕೋಡಿ ಕನ್ಯಾನದ ಮಹಾಸತೀಶ್ವರಿ, ಮಣೂರು ಜಟ್ಟಿಗೇಶ್ವರ, ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನ, ಬಗ್ವಾಡಿ ಮಹಿಷಿಮರ್ದನಿ, ಬೆಣ್ಣೆಕುದ್ರು ಹೀಗೆ ಇನ್ನೂ ಹಲವು ದೇವಸ್ಥಾನಗಳು ಪುನರ್ ನವಿಕರಣಗೊಂಡವು.
ಸಾಂಸ್ಕ್ರತಿಕ ಕ್ಷೇತ್ರ: ಯಕ್ಷಗಾನದ ಕಲಾ ಸಂಸ್ಥೆಗಳಲ್ಲಿ ತೊಡಗಿಸಿಕೊಂಡ ಇವರು ಕಾರಂತ ಹುಟ್ಟೂರ ಪ್ರತಿಷ್ಠಾನದ ರೂವಾರಿಗಳಲ್ಲೊಬ್ಬರು. ಸಾಮಾಜಿಕವಾದ ಹಲವಾರು ವಿಚಾರಗಳಿಗೆ ಕೊಡುಗೈ ದಾನಿಯಾಗಿ, ಬಡವರ ಕಣ್ಣಿರನ್ನು ಒರಸುವ ಸಲುವಾಗಿ ತಮ್ಮದೇ ಗೀತಾನಂದ ಪೌಂಡೇಶನ್ ಪ್ರಾರಂಭಿಸಿ ಅದರಲ್ಲಿ ಹತ್ತು ಹಲವು ಸಮಾಜ ಮುಖಿ ಕಾರ್ಯಗಳನ್ನು ಹಮ್ಮಿಕೊಂಡರು.
ಸರಳ ಸಜ್ಜನಿಕೆಯ ಸಾಕಾರ ಮೂರ್ತಿಯಾಗಿ ಸಾಮಾಜಿಕ ಅಭಿವೃಧ್ಧಿಯ ಹರಿಕಾರರಾಗಿ ಕೋಟ ಪರಿಸರದ ಹೆಚ್ಚಿನೆಲ್ಲಾ ಕಾರ್ಯಕ್ರಮಗಳ ಆಶ್ರಯದಾತ ರಾಗಿ ಎಲ್ಲರ ಪ್ರೀತಿಗೆ ಪಾತ್ರರಾಗಿರುವ ಆನಂದ್ ಕುಂದರ್ ಚಿಕ್ಕ ಮಕ್ಕಳೊಂದಿಗೆ ಕೂಡಾ ವಿನಯಶೀಲರಾಗಿ ವ್ಯವಹರಿಸುವವರು. ಕೋಟ ಪರಿಸರದಲ್ಲಿ ತನ್ನಣ್ಣ ಉಡುಪಿ ಜಿಲ್ಲಾ ಪರಿಷತ್‌ನ ಮಾಜಿ ಅಧ್ಯಕ್ಷ ದಿ.ಕೆ.ಸಿ.ಕುಂದರ್‌ರ ಹೆಸರನ್ನು ಚಿರಸ್ಥಾಯಿಗೊಳಿಸಲು ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡು ಜನಪ್ರಿಯತೆ ಪಡೆದಿದ್ದಾರೆ.
ಮುಂಬೈಯಲ್ಲಿ ಕಾರ್ಯನಿರ್ವಹಿಸುತಿದ್ದ ಆನಂದ್ ಸಿ ಕುಂದರ್, ಅಣ್ಣ ಕೆ.ಸಿ.ಕುಂದರ್‌ರ ಒತ್ತಾಸೆಯಂತೆ ಕೋಟಕ್ಕೆ ಮರಳಿ ತನ್ನ ಕುಲಕಸುಬಾದ ಮತ್ಯೋದ್ಯಮ ಕ್ಷೇತ್ರದಲ್ಲಿ ತೊಡಗಿಕೊಂಡರು. ಈ ಮೂಲಕ ಪರಿಸರದ ನೂರಾರು ಯುವಕರಿಗೆ ಉದ್ಯೋಗವನ್ನು ನೀಡಿದ ತೃಪ್ತಿಯನ್ನು ಪಡೆದಿದ್ದಾರೆ.