ಎನ್‌ಡಿಎ ಮೈತ್ರಿಕೂಟದಲ್ಲಿ ಮುಂದುವರಿಕೆ ಬಗ್ಗೆ ಶೀಘ್ರ ನಿರ್ಧಾರ ಪ್ರಕಟ: ಕುಶ್ವಾಹ
ಹೊಸದಿಲ್ಲಿ, ನ.28: ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಲ್ಲಿ ಮುಂದುವರಿಯುವುದೋ ಅಥವಾ ಬೇಡವೋ ಎಂಬ ಬಗ್ಗೆ ತನ್ನ ನಿರ್ಧಾರ ವನ್ನು ಶೀಘ್ರವೇ ಪ್ರಕಟಿಸುವುದಾಗಿ ಕೇಂದ್ರ ಸಚಿವ ಹಾಗೂ ರಾಷ್ಟ್ರೀಯ ಲೋಕಸಮತಾ ಪಕ್ಷ (ಆರ್‌ಎಲ್‌ಎಸ್ಪಿ) ಉಪೇಂದ್ರ ಕುಶ್ವಾಹ ತಿಳಿಸಿದ್ದಾರೆ.
ಹೊಸದಿಲ್ಲಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು ಡಿಸೆಂಬರ್ ತಿಂಗಳ ಆರಂಭದಲ್ಲಿ ನಡೆಯಲಿರುವ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸುವುದಾಗಿ ತಿಳಿಸಿದರು. ಮುಂಬರುವ 2019ರ ಲೋಕಸಭಾ ಚುನಾವಣೆಯಲ್ಲಿ ಸೀಟು ಹಂಚಿಕೊಳ್ಳುವ ಕುರಿತು ಚರ್ಚಿಸಲು ತಾನು ಪ್ರಧಾನಿಯ ಭೇಟಿಯ ನಿರೀಕ್ಷೆಯಲ್ಲಿರುವುದಾಗಿ ಹೇಳಿದ್ದಾರೆ.
ಬಿಜೆಪಿ ವರಿಷ್ಠ ಅಮಿತ್ ಶಾ ಜೊತೆಗೆ ಮಾತುಕತೆಗೆ ನಡೆಸಲು ಅವಕಾಶ ತನಗೆ ಅವಕಾಶ ನೀಡಲಾಗಿಲ್ಲವೆಂದು ಹೇಳಿದ ಕುಶ್ವಾಹ‘‘ನಾನು ಎನ್‌ಡಿಎ ಮೈತ್ರಿಕೂಟದಲ್ಲಿದ್ದೇನಾದರೂ, ನನ್ನನ್ನು ಹಿಂದೆ ಸರಿಸಲಾಗುತ್ತಿದೆ. ಇದು ನನ್ನ ಪಕ್ಷಕ್ಕಾದ ಅವಮಾನ. ನಾನು ಎರಡು ಬಾರಿ ಅಮಿತ್ ಶಾ ಅವರ ಭೇಟಿಗೆ ಯತ್ನಿಸಿದ್ದೆ ಆದರೆ ಅವರು ಬ್ಯುಸಿಯಾಗಿದ್ದರು. ಪ್ರಧಾನಿ ಮೋದಿಯವರನ್ನು ಭೇಟಿಯಾಗುವುದು ನನಗಿರುವ ಕೊನೆಯ ಆಯ್ಕೆಯಾಗಿದೆ. ಒಂದು ವೇಳೆ ಅವರನ್ನು ಭೇಟಿಯಾದ ಬಳಿಕ ಯಾವ ಬದಲಾವಣೆ ಯಾಗಲಿದೆಯೆಂಬುದನ್ನು ನೋಡೋಣ. ಆನಂತರ ನನ್ನ ಪಕ್ಷವು ಡಿಸೆಂಬರ್ 4 ಹಾಗೂ 5ರಂದು ಸಭೆ ಸೇರಲಿದ್ದು, ಮುಂದೇನು ಮಾಡಬೇಕೆಂಬುದನ್ನು ನಿರ್ಧರಿಸಲಿದೆ’’ ಎಂದು ಕುಶ್ವಾಹ ತಿಳಿಸಿದರು.
ಸೀಟು ಹಂಚಿಕೆಗೆ ಸಂಬಂಧಿಸಿ ತಾನು ನವೆಂಬರ್ 30ರವರೆಗೆ ಕಾಯುವುದಾಗಿ ಆರ್‌ಎಲ್‌ಎಸ್ಪಿ ವರಿಷ್ಠರೂ ಆಗಿರುವ ಕುಶ್ವಾಹ ತಿಳಿಸಿದ್ದಾರೆ. ಬಿಜೆಪಿಯು ತನ್ನ ಪಕ್ಷಕ್ಕೆ ನೀಡಲುದ್ದೇಶಿಸಿರುವ ಸೀಟುಗಳ ಸಂಖ್ಯೆಯ ಬಗ್ಗೆ ತಾನು ಅಸಮಾಧಾನಗೊಂಡಿರುವುದಾಗಿ ಅವರು ಹೇಳಿದ್ದಾರೆ.