ನ್ಯಾ.ಲೋಯಾ ನಿಗೂಢ ಸಾವು ಪ್ರಕರಣ: ಅರ್ಜಿಯ ವಿಚಾರಣೆಯಿಂದ ಹಿಂದೆ ಸರಿದ ಇನ್ನೋರ್ವ ಹೈಕೋರ್ಟ್ ನ್ಯಾಯಾಧೀಶ!
ನಾಗ್ಪುರ,ನ.28: ಸಿಬಿಐ ನ್ಯಾಯಾಧೀಶ ಬಿ.ಎಚ್.ಲೋಯಾ ಅವರ ಸಾವಿನ ಕುರಿತು ಅರ್ಜಿಯ ವಿಚಾರಣೆಯಿಂದ ವಿಭಾಗೀಯ ಪೀಠವು ದೂರವುಳಿದ ಬೆನ್ನಿಗೇ ಬುಧವಾರ ಬಾಂಬೆ ಉಚ್ಚ ನ್ಯಾಯಾಲಯದ ನಾಗ್ಪುರ ಪೀಠದ ಇನ್ನೋರ್ವ ನ್ಯಾಯಾಧೀಶರು ಪ್ರಕರಣದಿಂದ ಹಿಂದೆ ಸರಿದಿದ್ದಾರೆ.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಕೆಲವು ಹಿರಿಯ ಐಪಿಎಸ್ ಅಧಿಕಾರಿಗಳು ಆರೋಪಿಗಳಾಗಿದ್ದ ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‌ಕೌಂಟರ್ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದ್ದ ನ್ಯಾ.ಲೋಯಾ ಅವರು 2014ರಲ್ಲಿ ನಾಗ್ಪುರದ ಸರಕಾರಿ ಅತಿಥಿಗೃಹದಲ್ಲಿ ತಂಗಿದ್ದ ಸಂದರ್ಭ ಹೃದಯಾಘಾತದಿಂದ ಮೃತಪಟ್ಟಿದ್ದರು.
ನಕಲಿ ಎನ್‌ಕೌಂಟರ್ ಸಂದರ್ಭದಲ್ಲಿ ಗುಜರಾತ್‌ನ ಗೃಹಸಚಿವರಾಗಿದ್ದ ಅಮಿತ್ ಶಾ ಅವರನ್ನು ಬಳಿಕ ಪ್ರಕರಣದಿಂದ ಮುಕ್ತಗೊಳಿಸಲಾಗಿತ್ತು.
ನ್ಯಾ.ಲೋಯಾ ಸಾವಿಗೆ ಸಂಬಂಧಿಸಿದಂತೆ ವಕೀಲ ಸತೀಶ ಉಕೆ ಅವರು ಸಲ್ಲಿಸಿರುವ ಅರ್ಜಿಯು ನ.26ರಂದು ಇಲ್ಲಿ ನ್ಯಾಯಮೂರ್ತಿಗಳಾದ ಎಸ್.ಬಿ.ಶುಕ್ರೆ ಮತ್ತು ಎಸ್.ಎಂ.ಮೋಡಕ್ ಅವರ ವಿಭಾಗೀಯ ಪೀಠದೆದುರು ವಿಚಾರಣೆಗೆ ಬಂದಿತ್ತು. ಆದರೆ ನ್ಯಾಯಮೂರ್ತಿಗಳು ವಿಚಾರಣೆಯಿಂದ ಹಿಂದಕ್ಕೆ ಸರಿದಿದ್ದರು. ಬಳಿಕ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಪಿ.ಎನ್.ದೇಶಮುಖ್ ಮತ್ತು ಸ್ವಪ್ನಾ ಜೋಶಿ ಅವರ ಪೀಠಕ್ಕೆ ಒಪ್ಪಿಸಲಾಗಿತ್ತು. ಬುಧವಾರ ಅರ್ಜಿಯು ವಿಚಾರಣೆಗೆ ಬಂದಾಗ ಪ್ರಕರಣದಿಂದ ತಾನು ದೂರವಿರುವುದಾಗಿ ನ್ಯಾ.ಜೋಶಿ ತಿಳಿಸಿದರು.
ಸರಕಾರಿ ಅತಿಥಿಗೃಹದಲ್ಲಿಯ ದಾಖಲೆಗಳು ಸೇರಿದಂತೆ ನ್ಯಾ.ಲೋಯಾರ ‘ಶಂಕಾಸ್ಪದ’ ಸಾವಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಜತನವಾಗಿರಿಸುವಂತೆ ಉಕೆ ತನ್ನ ಅರ್ಜಿಯಲ್ಲಿ ಕೋರಿದ್ದಾರೆ. ಅವರು ಈಗಾಗಲೇ ಲೋಯಾರ ಸಾವಿನ ಕುರಿತು ತನಿಖೆಯನ್ನು ಕೋರಿ ನಾಗ್ಪುರದಲ್ಲಿಯ ಜೆಎಂಎಫ್‌ಸಿ ನ್ಯಾಯಾಲಯದ ಮೆಟ್ಟಿಲನ್ನೇರಿದ್ದಾರೆ.
ಲೋಯಾ ಅವರ ಸಾವಿನ ಕುರಿತು ಸ್ವತಂತ್ರ ತನಿಖೆಯ ಬೇಡಿಕೆಗಳನ್ನು ಕಳೆದ ಎಪ್ರಿಲ್‌ನಲ್ಲಿ ತಿರಸ್ಕರಿಸಿದ್ದ ಸರ್ವೋಚ್ಚ ನ್ಯಾಯಾಲಯವು,ಅವರು ಸಹಜ ಕಾರಣಗಳಿಂದ ಸಾವನ್ನಪ್ಪಿದ್ದಾರೆ ಎಂದು ಎತ್ತಿ ಹಿಡಿದಿತ್ತು.