2018ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ: ಹಿರಿಯ ಸ್ವಾತಂತ್ರ ಹೋರಾಟಗಾರ ಬಸವರಾಜ ಬಿಸರಳ್ಳಿ

ಬೆಂಗಳೂರು,ನ.28: 2018ನೆ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯಸರಕಾರ ಪ್ರಕಟಿಸಿದ್ದು, ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದಿಕೊಂಡದ್ದಕ್ಕೆ ಈ ಪ್ರಶಸ್ತಿಗೆ ಬಸವರಾಜ ಬಿಸರಳ್ಳಿ ಆಯ್ಕೆಯಾಗಿದ್ದಾರೆ.
ಕೊಪ್ಪಳ ತಾಲೂಕಿನ ಬಿಸರಳ್ಳಿಯ ಹಿರಿಯ ಚೇತನ ಶರಣ ಬಸವರಾಜ ಬಿಸರಳ್ಳಿ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು. ಕವಲೂರು ಶಾಲೆಯ ಶಿಕ್ಷಕರಾಗಿ ವೃತ್ತಿ ಆರಂಭಿಸಿ, ಮಂಗಳೂರು, ಕೊಪ್ಪಳ ಸೇರಿದಂತೆ ನಾನಾ ಕಡೆ ಕರ್ತವ್ಯ ನಿರ್ವಹಿಸಿದ್ದಾರೆ. 1992ರಲ್ಲಿ ಮಂಗಳೂರು ಶಾಲೆಯಲ್ಲಿ ನಿವೃತ್ತಿಯಾಗಿದ್ದರು. ಅಷ್ಟೇ ಅಲ್ಲದೆ, ಕರ್ನಾಟಕ ವಿವಿಯಲ್ಲಿ ಎಂಎ ಪದವಿ ಪೂರೈಸಿದ್ದಾರೆ.
ನಿವೃತ್ತಿ ಬಳಿಕವಾದರೂ ಪಿಎಚ್‌ಡಿ ಪಡೆಯಬೇಕೆನ್ನುವ ಆಸೆಯಿಂದಾಗಿ ಶರಣ ಬಸವರಾಜ ಬಿಸರಳ್ಳಿ ಅವರು ಪ್ರಸ್ತುತ ಸಾಲಿನಲ್ಲಿ ಪಿಎಚ್‌ಡಿಯಲ್ಲಿ ವಚನ ಸಾಹಿತ್ಯ ಅಧ್ಯಯನದ ವಿಭಾಗಕ್ಕಾಗಿ ಪರೀಕ್ಷೆ ಬರೆದು ಸುದ್ದಿಯಾಗಿದ್ದರು.
91ರ ಇಳಿ ವಯಸ್ಸಿನ ಬಸವರಾಜ ಬಿಸರಳ್ಳಿ ಅವರಿಗೆ ನಾಲ್ವರು ಪುತ್ರರು, ಒಬ್ಬಳು ಪುತ್ರಿ ಇದ್ದಾರೆ. ಸಾಹಿತ್ಯ ಆಸಕ್ತರಾಗಿರುವ ಇವರು ಐದು ಪುಸ್ತಕಗಳನ್ನು ಬರೆದಿದ್ದಾರೆ. ಪ್ರಸ್ತುತ ಸಾಲಿನ ರಾಜ್ಯ ಸರಕಾರ ಪ್ರದಾನಿಸುವ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.







