2018ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ: 4 ರಾಜ್ಯಗಳಲ್ಲಿ ರಾಜ್ಯಪಾಲೆಯಾಗಿ ಸೇವೆ ಸಲ್ಲಿಸಿದ್ದ ಮಾರ್ಗರೆಟ್ ಆಳ್ವ

ಬೆಂಗಳೂರು,ನ.28: 2018ನೆ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರಕಾರ ಪ್ರಕಟಿಸಿದ್ದು, ಸಮಾಜ ಸೇವೆಗಾಗಿ ಮಾರ್ಗರೆಟ್ ಆಳ್ವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಮಂಗಳೂರಿನಲ್ಲಿ 1942 ರಲ್ಲಿ ಜನಿಸಿದ ಮಾರ್ಗರೆಟ್ ಆಳ್ವ, ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಕಲಾ ಪದವಿ, ಸರಕಾರಿ ಲಾ ಕಾಲೇಜಿನಲ್ಲಿ ಕಾನೂನು ಪದವಿಯನ್ನು ಪಡೆದವರು. ವೃತ್ತಿಯಲ್ಲಿ ವಕೀಲರು. ಕಾನೂನು ಕಲಿಯುವಾಗ ಪರಿಚಯವಾದ ನಿರಂಜನ್ ಆಳ್ವರೊಂದಿಗೆ ವಿವಾಹವಾಗಿ, ನಾಲ್ಕು (ಮೂವರು ಹೆಣ್ಣು, ಒಂದು ಗಂಡು) ಮಕ್ಕಳ ತಾಯಿಯಾದರು. ಹಾಗೆ ನೋಡಿದರೆ, ಮಾರ್ಗರೆಟ್ ಆಳ್ವರಿಗೂ ರಾಜಕಾರಣಕ್ಕೂ ಸಂಬಂಧವಿಲ್ಲ. ಆದರೆ ಗಂಡ ನಿರಂಜನ್ ಆಳ್ವರ ಮನೆ ಕಡೆಯಿಂದ ಮಾವ ಜೋಕ್ಹಿಮ್ ಆಳ್ವ, ಅತ್ತೆ ವಾಯ್ಲೆಟ್ ಆಳ್ವ- ಇಬ್ಬರೂ ಸಂಸತ್ ಸದಸ್ಯರು. ಒಬ್ಬರು ಲೋಕಸಭೆ, ಇನ್ನೊಬ್ಬರು ರಾಜ್ಯಸಭಾ ಸದಸ್ಯರಾಗಿದ್ದವರು. ಈ ಹಿನ್ನೆಲೆಯ ಮಾರ್ಗರೆಟ್ ಆಳ್ವರಿಗೆ ಮೊತ್ತ ಮೊದಲ ಬಾರಿಗೆ ರಾಜಕೀಯ ದೀಕ್ಷೆ ನೀಡಿದವರು, ಅಧಿಕಾರದ ಸ್ಥಾನವನ್ನು ಕಲ್ಪಿಸಿಕೊಟ್ಟವರು ದೇವರಾಜ ಅರಸು. ಮೊದಲಿಗೆ 1974 ರಲ್ಲಿ, ಮತ್ತೊಂದು ಸಲ 1980 ರಲ್ಲಿ, ಎರಡು ಸಲ ಮಾರ್ಗರೆಟ್ ಆಳ್ವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಆಯ್ಕೆ ಮಾಡಿ ದೆಹಲಿಗೆ ಕಳುಹಿಸಿಕೊಡುವಲ್ಲಿ ಅರಸರದ್ದು ಪ್ರಮುಖ ಪಾತ್ರ.
ಮಾರ್ಗರೆಟ್ ಆಳ್ವ ಅವರು ರಾಜ್ಯ ಮಹಿಳಾ ಕಾಂಗ್ರೆಸ್ ಕನ್ವೀನರ್ ಆಗಿ, ನಾಲ್ಕು ಬಾರಿ ರಾಜ್ಯಸಭಾ(1974ರಿಂದ 1998ವರೆಗೆ), ಒಂದು ಬಾರಿ ಲೋಕಸಭಾ(1999ರಿಂದ 2004) ಸದಸ್ಯರಾಗಿ, ರಾಜೀವ್ ಗಾಂಧಿ ಮತ್ತು ಪಿ.ವಿ.ನರಸಿಂಹರಾವ್ರ ಕೇಂದ್ರ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆ ಮಂತ್ರಿಯಾಗಿದ್ದವರು. ಹತ್ತು ಹಲವು ಮಹತ್ವದ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿ ರಾಜಕೀಯ ವಲಯದಲ್ಲಿ ಹೆಸರು ಮಾಡಿದವರು. ಆನಂತರ ಹಿರಿತನ, ಅನುಭವದ ಆಧಾರದ ಮೇಲೆ ಎಐಸಿಸಿ ಜನರಲ್ ಸೆಕ್ರೆಟರಿಯಾಗಿ ಐದು ವರ್ಷ ಪಕ್ಷದ ಜವಾಬ್ದಾರಿಯುತ ಸ್ಥಾನದಲ್ಲಿದ್ದು ಪಕ್ಷ ಸಂಘಟನೆಗಾಗಿ ದುಡಿದವರು. ಅಲ್ಲದೆ ಗುಜರಾತ್, ರಾಜಸ್ತಾನ್, ಗೋವಾ ಮತ್ತು ಉತ್ತರಾಖಂಡ ರಾಜ್ಯಗಳಿಗೆ ಗೌರವಾನ್ವಿತ ರಾಜ್ಯಪಾಲ ಹುದ್ದೆ ಅಲಂಕರಿಸಿ, ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದವರು. ಈಗ ಬೆಂಗಳೂರಿನ ಕೂಕ್ ಟೌನ್ ನಲ್ಲಿ ವಿಶ್ರಾಂತ ಜೀವನ ಸಾಗಿಸುತ್ತಿದ್ದಾರೆ. ಆಳವಾದ ಅಧ್ಯಯನ, ಅಪಾರ ರಾಜಕೀಯ ಅನುಭವಗಳಿಂದ ಮಾಗಿದ ಮಾರ್ಗರೆಟ್ ಆಳ್ವರು ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.







