ನೋಟು ಅಮಾನ್ಯೀಕರಣವು ವಿತ್ತೀಯ ವ್ಯವಸ್ಥೆಗೆ ನೀಡಿದ ದೊಡ್ಡ ಆಘಾತ: ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಸುಬ್ರಹ್ಮಣ್ಯನ್
ಹೊಸದಿಲ್ಲಿ, ನ.29: ನೋಟು ರದ್ದತಿ ಕ್ರಮವು ಕಠಿಣ ಹಾಗೂ ಭಾರೀ ಆರ್ಥಿಕ ಆಘಾತವಾಗಿದ್ದು, ಇದರಿಂದ ಶೇ.8ರಷ್ಟಿದ್ದ ಆರ್ಥಿಕ ಅಭಿವೃದ್ಧಿಯ ದರ ಪತನದ ದಾರಿಯಲ್ಲಿ ಸಾಗಿ ಶೇ.6.8ಕ್ಕೆ ಕುಸಿಯುವಂತಾಯಿತು ಎಂದು ಮಾಜಿ ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ಅರವಿಂದ್ ಸುಬ್ರಮಣಿಯನ್ ಹೇಳಿದ್ದಾರೆ.
ಇಂತಹ ನಿರ್ಧಾರಗಳನ್ನು ಕೈಗೊಳ್ಳುವಾಗ ಪ್ರಧಾನಿ ಮೋದಿ, ಪ್ರಮುಖವಾಗಿ ಅನೌಪಚಾರಿಕ ಕ್ಷೇತ್ರದಲ್ಲಿ ಜನಹಿತ ಕಾರ್ಯದ ವೆಚ್ಚವು ಗಣನೀಯವಾಗಿದೆ ಎಂಬುದನ್ನು ಹೊರತುಪಡಿಸಿ ಬೇರೆ ಯಾವುದೇ ಪ್ರಬಲ ಪ್ರಾಯೋಗಿಕ ದೃಷ್ಟಿಕೋನವನ್ನು ಹೊಂದಿರಲಿಲ್ಲ ಎಂದವರು ಹೇಳಿದ್ದಾರೆ.
‘ಆಫ್ ಕೌನ್ಸೆಲ್: ದಿ ಚಾಲೆಂಜಸ್ ಆಫ್ ದಿ ಮೋದಿ-ಜೇಟ್ಲಿ ಇಕಾನಮಿ’ ಎಂಬ ತನ್ನ ಮುಂಬರುವ ಕೃತಿಯಲ್ಲಿ ಒಂದು ಅಧ್ಯಾಯವನ್ನು ನೋಟು ರದ್ದತಿಯ ಕುರಿತು ಮೀಸಲಿಟ್ಟಿರುವ ಸುಬ್ರಮಣಿಯನ್ , ನೋಟು ರದ್ದತಿ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯ ಸಂದರ್ಭ ತನ್ನೊಡನೆ ಸಮಾಲೋಚಿಸಲಾಗಿದೆಯೇ ಎಂಬ ಪ್ರಶ್ನೆಯ ಕುರಿತು ತನ್ನ ಮೌನವನ್ನು ಮುಂದುವರಿಸಿದ್ದಾರೆ.
ಒಂದು ಅನಿರೀಕ್ಷಿತ, ಏಕಾಏಕಿ ನಿರ್ಧಾರದ ಮೂಲಕ ಚಲಾವಣೆಯಲ್ಲಿದ್ದ ಶೇ.86ರಷ್ಟು ಕರೆನ್ಸಿಗಳನ್ನು ಹಿಂಪಡೆಯಲಾಯಿತು. ನೋಟು ರದ್ದತಿ ವಾಸ್ತವಿಕ ಜಿಡಿಪಿ ಅಭಿವೃದ್ಧಿಯ ದರದ ಮೇಲೆ ಪರಿಣಾಮ ಬೀರಿತು. ಮೊದಲೇ ನಿಧಾನಗತಿಯಲ್ಲಿದ್ದ ಅಭಿವೃದ್ಧಿಯ ದರ ಮತ್ತಷ್ಟು ಕಡಿಮೆಯಾಗುತ್ತಾ ಹೋಯಿತು. ನೋಟು ರದ್ದತಿಯ ಮೊದಲಿನ ಆರು ತ್ರೈಮಾಸಿಕ ಅವಧಿಗಳಲ್ಲಿ ಅಭಿವೃದ್ಧಿಯ ದರ ಸರಾಸರಿ ಶೇ.8ರಷ್ಟಿತ್ತು. ಬಳಿಕದ ಏಳು ತ್ರೈಮಾಸಿಕ ಅವಧಿಯಲ್ಲಿ ಅಭಿವೃದ್ಧಿಯ ಸರಾಸರಿ ದರ ಶೇ.6.8 ಆಗಿದೆ ಎಂದು ‘ದಿ ಟು ಫಝಲ್ಸ್ ಆಫ್ ಡಿಮಾನಿಟೈಸೇಷನ್-ಪೊಲಿಟಿಕಲ್ ಆ್ಯಂಡ್ ಇಕನಾಮಿಕ್’ ಎಂಬ ಅಧ್ಯಾಯದಲ್ಲಿ ಅವರು ವಿವರಿಸಿದ್ದಾರೆ.
ನೋಟು ರದ್ದತಿಯಿಂದ ಜಿಡಿಪಿ ಅಭಿವೃದ್ಧಿ ದರ ಕುಸಿದಿದೆಯೇ ಎಂಬುದು ಇಲ್ಲಿ ಚರ್ಚೆಯ ವಿಷಯವಲ್ಲ, ಎಷ್ಟು ಪ್ರಮಾಣದಲ್ಲಿ ಕುಸಿದಿದೆ ಎಂಬುದು ಚರ್ಚೆಯ ವಿಷಯವಾಗಿದೆ . ಇದೇ ವೇಳೆ ಅಧಿಕ ಬಡ್ಡಿದರ, ಜಿಎಸ್‌ಟಿ ಅನುಷ್ಠಾನ ಮುಂತಾದ ಕೆಲವು ಉಪಕ್ರಮಗಳೂ ಜಿಡಿಪಿ ಅಭಿವೃದ್ಧಿ ದರದ ಮೇಲೆ ಪ್ರಭಾವ ಬೀರಿವೆ ಎಂದು ಹೇಳಿದ್ದಾರೆ. ನೋಟು ರದ್ದಾದ ಬಳಿಕ ಅನೌಪಚಾರಿಕ ಸಾಲವನ್ನು ಹೆಚ್ಚಿಸುವ ಮೂಲಕ ಉತ್ಪಾದನೆಯನ್ನು ಯಥಾಸ್ಥಿತಿ ಉಳಿಸಿಕೊಳ್ಳಬಹುದು ಎಂದು ಜನತೆ ಭಾವಿಸಿದ್ದರು. ಅಂತಿಮವಾಗಿ ಸ್ವಲ್ಪ ಮಟ್ಟಿಗೆ ನಗದು ವ್ಯವಹಾರದಿಂದ ಡಿಜಿಟಲ್ ಪಾವತಿ ಕ್ರಮಕ್ಕೆ ಜನತೆ ಪರಿವರ್ತನೆಗೊಂಡರು. ನೋಟು ರದ್ದತಿಯಿಂದ ಆಗಿರುವ ಇನ್ನೂ ಕೆಲವು ಪರಿಣಾಮಗಳ ವಿವರಣೆ ನನ್ನ ಕೃತಿಯಲ್ಲಿ ತಪ್ಪಿಹೋಗಿರಬಹುದು ಎಂದು ಹೇಳಿದ್ದಾರೆ.
ಬಡಜನರ ಪಾಡನ್ನು ಗಮನಿಸಿದರೆ, ನನ್ನ ಆಡು ಹೋಯಿತು. ಆದರೆ ಅವರು(ಶ್ರೀಮಂತರು) ಹಲವು ಹಸುಗಳನ್ನು ಕಳೆದುಕೊಂಡರು ಎಂದು ಸಮಾಧಾನ ಪಟ್ಟುಕೊಳ್ಳುವಂತಾಗಿದೆ. ಶ್ರೀಮಂತರು ಅಕ್ರಮವಾಗಿ ಸಂಪಾದಿಸಿದ ಹಣವನ್ನು ಕಳೆದುಕೊಂಡರು ಎಂಬ ಭ್ರಮೆಯಲ್ಲಿ ಬಡಜನತೆ ತಮಗಾದ ಸಂಕಷ್ಟವನ್ನು ಮರೆಯುವಂತಾಗಿದೆ ಎಂದು ಸುಬ್ರಮಣಿಯನ್ ತಿಳಿಸಿದ್ದಾರೆ.