ಹನುಮಂತ ದಲಿತ ಎಂದ ಆದಿತ್ಯನಾಥ್ ಗೆ ಬ್ರಾಹ್ಮಣ ಮಹಾಸಭಾದಿಂದ ಕಾನೂನು ನೋಟಿಸ್

ಹೊಸದಿಲ್ಲಿ, ನ.25: ಹನುಮಾನ್ ದಲಿತನೆಂದು ಹೇಳಿದ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ 3 ದಿನಗಳೊಳಗೆ ಕ್ಷಮೆಯಾಚಿಸುವಂತೆ ರಾಜಸ್ಥಾನದ ಸರ್ವ ಬ್ರಾಹ್ಮಣ ಮಹಾಸಭಾ ಕಾನೂನು ನೋಟಿಸ್ ಜಾರಿಗೊಳಿಸಿದೆ.
ರಾಜಸ್ತಾನದ ಆಲ್ವಾರ್‌ನಲ್ಲಿ ನಡೆದ ಚುನಾವಣಾ ಪ್ರಚಾರ ರ್ಯಾಲಿಯೊಂದರಲ್ಲಿ ಮಾತನಾಡಿದ ಆದಿತ್ಯನಾಥ್, ‘‘ಹನುಮಾನ್ ಓರ್ವ ಅರಣ್ಯವಾಸಿಯಾಗಿದ್ದ, ಅವಕಾಶವಂಚಿತ ಹಾಗೂ ದಲಿತನಾಗಿದ್ದ. ಆತನ ಶ್ರಮ, ಸಾಹಸವು ಉತ್ತರದಿಂದ ದಕ್ಷಿಣದವರೆಗೆ ಹಾಗೂ ಪೂರ್ವದಿಂದ ಪಶ್ಚಿಮದವರೆಗೆ ಎಲ್ಲಾ ಭಾರತೀಯ ಸಮುದಾಯಗಳನ್ನು ಒಗ್ಗೂಡಿಸಿದೆ’’ ಎಂದು ಹೇಳಿದ್ದರು.
ರಾಜಕೀಯ ಲಾಭಕ್ಕಾಗಿ ಭಗವಾನ್ ಹನುಮಂತನ ಜಾತಿಯನ್ನು ಬಿಜೆಪಿಯು ಎಳೆದು ತರುತ್ತಿದೆಯೆಂದು ಆರೋಪಿಸಿ ರಾಜಸ್ಥಾನ ಸರ್ವ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಸುರೇಶ್ ಮಿಶ್ರಾ ಅವರು ಆದಿತ್ಯನಾಥ್ ರಿಗೆ ಕಾನೂನು ನೋಟಿಸ್ ಜಾರಿಗೊಳಿಸಿದ್ದಾರೆ.
‘‘ಭಗವಾನ್ ಹನುಮಾನ್ ಅವಕಾಶವಂಚಿತನೆಂದು ಉತ್ತರಪ್ರದೇಶ ಮುಖ್ಯಮಂತ್ರಿ ಬಣ್ಣಿಸಿರುವುದನ್ನು ಕೇಳಿ ನನಗೆ ವಿಷಾದವಾಗಿದೆ. ಅವರ ಹೇಳಿಕೆಯು ಹಲವಾರು ಭಕ್ತರ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದೆ. ಚುನಾವಣೆಯಲ್ಲಿ ರಾಜಕೀಯ ಲಾಭ ಗಳಿಸಲು ನಡೆಸಿದ ಪ್ರಯತ್ನ ಇದಾಗಿದೆ’’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಈ ಮಧ್ಯೆ ಆದಿತ್ಯನಾಥ್ ಅವರ ಹೇಳಿಕೆಯನ್ನು ಕಾಂಗ್ರೆಸ್ ನಾಯಕ ಪ್ರಮೋದ್ ತಿವಾರಿ ತೀವ್ರವಾಗಿ ಖಂಡಿಸಿದ್ದಾರೆ. ಬಿಜೆಪಿಯು ವ್ಯಕ್ತಿ ಹಾಗೂ ಸಮಾಜವನ್ನು ವಿಭಜಿಸಿದ್ದಲ್ಲದೆ, ದೇವರನ್ನು ಕೂಡಾ ಇದೇ ಮೊದಲ ಬಾರಿಗೆ ಜಾತಿ ಆಧಾರದಲ್ಲಿ ವಿಭಜಿಸಿದೆಯೆಂದು ಅವರು ಟೀಕಿಸಿದ್ದಾರೆ.