ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸುರಕೋಡ್ ಪ್ರಯಾಣಿಸುತ್ತಿದ್ದ ಕಾರು ಅಪಘಾತ: ವ್ಯಕ್ತಿ ಸಾವು
ಪ್ರಶಸ್ತಿ ಸ್ವೀಕರಿಸಲು ತೆರಳುತ್ತಿದ್ದಾಗ ನಡೆದ ಘಟನೆ

ಬೆಂಗಳೂರು/ಚಿತ್ರದುರ್ಗ, ನ. 29: ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಲು ಬೆಳಗಾವಿ ಜಿಲ್ಲೆ, ರಾಮದುರ್ಗದಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಸಾಹಿತಿ ಹಸನ್ ನಯೀಂ ಸುರಕೋಡ್ ಅವರು ಪ್ರಯಾಣಿಸುತ್ತಿದ್ದ ಕಾರು, ಮುಂದೆ ಸಾಗುತ್ತಿದ್ದ ಆಟೋಗೆ ಢಿಕ್ಕಿಯಾದ ಪರಿಣಾಮ ಸಂಭವಿಸಿದ ಅಪಘಾತದಲ್ಲಿ ಅವರ ತಲೆಗೆ ಪೆಟ್ಟು ತಗುಲಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಸಮೀಪದ ರಾಷ್ಟ್ರೀಯ ಹೆದ್ದಾರಿ 4ರಲ್ಲಿನ ಚಿಕ್ಕಬೆನ್ನೂರು ಸಮೀಪ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಹಂಪನೂರು ಗ್ರಾಮದ ನಿವಾಸಿ ಸಿದ್ದೇಶ್(31) ಎಂಬವರು ಸ್ಥಳದಲ್ಲೆ ಅಸುನೀಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದಲ್ಲಿ ಹಸನ್ ನಯೀಂ ಸುರಕೋಡ ಅವರ ತಲೆಗೆ ಸ್ವಲ್ಪ ಪೆಟ್ಟಾಗಿದ್ದು, ಸುರಕೋಡ ಅವರ ಕಾರು ಮುಂದೆ ಸಾಗುತ್ತಿದ್ದ ಆಟೋರಿಕ್ಷಾಗೆ ಢಿಕ್ಕಿ ಹೊಡೆದ ಪರಿಣಾಮ ಆಟೋರಿಕ್ಷಾದಲ್ಲಿದ್ದ ಸಿದ್ದೇಶ್ ಎಂಬವರು ಸಾವನ್ನಪ್ಪಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಗುರುವಾರ ಮುಂಜಾನೆ 6ಗಂಟೆಯ ಸುಮಾರಿಗೆ ಅವಘಡ ಸಂಭವಿಸಿದ್ದು, ಸುರಕೋಡ ಅವರ ತಲೆಗೆ ಪೆಟ್ಟು ತಗುಲಿದ ಹಿನ್ನೆಲೆಯಲ್ಲಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಮತ್ತೊಂದು ವಾಹನದಲ್ಲಿ ಅವರನ್ನು ಬೆಂಗಳೂರಿಗೆ ಕಳುಹಿಸಿದ್ದಾರೆಂದು ಗೊತ್ತಾಗಿದೆ.
ರಾಮದುರ್ಗದಿಂದ ಬೆಂಗಳೂರಿಗೆ ಹಸನ್ ನಯೀಂ ಸುರಕೋಡ ಅವರು, ಕುಟುಂಬದ ಸದಸ್ಯರೊಂದಿಗೆ ಬೆಂಗಳೂರಿಗೆ ಆಗಮಿಸುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ಭರಮಸಾಗರ ಠಾಣಾ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.







