ಈ 78 ವರ್ಷದ ವೃದ್ಧ ಕೊಂದದ್ದು 90 ಜನರನ್ನು !
ಈತನ ಗುರಿ ಯಾರು ಗೊತ್ತಾ ?
ವಾಶಿಂಗ್ಟನ್, ನ. 29: ಅಮೆರಿಕದ ಟೆಕ್ಸಾಸ್ ಜೈಲಿನಲ್ಲಿರುವ 78 ವರ್ಷದ ಕೈದಿಯೋರ್ವ 90 ಕೊಲೆಗಳನ್ನು ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಈತ ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಭೀಕರ ಸರಣಿ ಕೊಲೆಗಾರನಾಗಿರುವ ಸಾಧ್ಯತೆಯಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಅಲೆಮಾರಿ ಬದುಕು ಸಾಗಿಸುತ್ತಿದ್ದ ಸ್ಯಾಮುಯೆಲ್ ಲಿಟಲ್ ಮುಖ್ಯವಾಗಿ ಮಾದಕ ವ್ಯಸನಿಗಳು ಮತ್ತು ವೇಶ್ಯೆಯರನ್ನು ಗುರಿಯಾಗಿಸುತ್ತಿದ್ದನು ಹಾಗೂ ಅವನ ಕಾರ್ಯಕ್ಷೇತ್ರ ಒಂದು ಕರಾವಳಿಯಿಂದ ಇನ್ನೊಂದು ಕರಾವಳಿಯವರೆಗೂ ವಿಸ್ತರಿಸಿತ್ತು ಎಂದು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ) ವರದಿಯೊಂದರಲ್ಲಿ ತಿಳಿಸಿದೆ.
6 ಅಡಿ 3 ಇಂಚು ಎತ್ತರದ ಮಾಜಿ ಬಾಕ್ಸರ್ ಲಿಟಲ್‌ನನ್ನು 2012ರಲ್ಲಿ ಕೆಂಟಕಿಯಲ್ಲಿರುವ ಮನೆಯಿಲ್ಲದವರ ಶಿಬಿರದಿಂದ ಬಂಧಿಸಲಾಗಿತ್ತು ಹಾಗೂ ಮಾದಕ ದ್ರವ್ಯಕ್ಕೆ ಸಂಬಂಧಿಸಿದ ಆರೋಪಗಳನ್ನು ಎದುರಿಸುವುದಕ್ಕಾಗಿ ಕ್ಯಾಲಿಫೋರ್ನಿಯಕ್ಕೆ ರವಾನಿಸಲಾಗಿತ್ತು.
ಅಲ್ಲಿ ಆತನ ಡಿಎನ್‌ಎಯು ಇತ್ಯರ್ಥವಾಗದೆ ಉಳಿದಿರುವ ಮೂರು ಪ್ರಕರಣಗಳ ಆರೋಪಿಯ ಡಿಎನ್‌ಎಯೊಂದಿಗೆ ಹೊಂದಿಕೆಯಾಯಿತು. 1987 ಮತ್ತು 1989ರ ನಡುವೆ ಲಾಸ್ ಏಂಜಲಿಸ್‌ನಲ್ಲಿ ಕೊಲೆಯಾದ ಮೂವರು ಮಹಿಳೆಯರ ಪ್ರಕರಣದಲ್ಲಿ ಅವನ ಅಪರಾಧವು 2014ರಲ್ಲಿ ಸಾಬೀತಾಯಿತು.
ಬಳಿಕ, 1970 ಮತ್ತು 2005ರ ನಡುವೆ ಮಾಡಿದ ಡಝನ್‌ಗಟ್ಟಳೆ ಕೊಲೆಗಳ ಬಗ್ಗೆ ಆತ ಒಂದೊಂದಾಗಿ ಬಾಯಿಬಿಟ್ಟನು ಎಂದು ಎಕ್ಟರ್ ಕೌಂಟಿಯ ಜಿಲ್ಲಾ ಅಟಾರ್ನಿ ಬಾಬಿ ಬ್ಲಾಂಡ್ ಹೇಳಿದರು.
ಒಟ್ಟು 90 ಕೊಲೆಗಳನ್ನು ಮಾಡಿರುವುದನ್ನು ಈವರೆಗೆ ಅವನು ಒಪ್ಪಿಕೊಂಡಿದ್ದಾನೆ. ಈ ಪೈಕಿ 34 ಪ್ರಕರಣಗಳಲ್ಲಿ ಪೊಲೀಸರು ಈವರೆಗೆ ತಪಾಸಣೆ ನಡೆಸಿದ್ದಾರೆ.
49 ಕೊಲೆಗಳ ಹಂತಕನನ್ನು ಹಿಂದಿಕ್ಕಿದ
ಇವನಿಗಿಂತಲೂ ಮೊದಲು ಅಮೆರಿಕದ ಅತ್ಯಂತ ಭೀಕರ ಸರಣಿ ಹಂತಕನಾಗಿ ಹೆಸರು ಮಾಡಿದವನು ಗ್ಯಾರಿ ರಿಜ್‌ವೇ. ಅವನ ವಿರುದ್ಧ 49 ಕೊಲೆ ಆರೋಪಗಳು ಸಾಬೀತಾಗಿವೆ. ಅವನೀಗ ವಾಶಿಂಗ್ಟನ್ ರಾಜ್ಯದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ.