ಡಿ. 2ರಿಂದ ರಾಮಕೃಷ್ಣ ಮಠದಿಂದ 5ನೆ ಹಂತದ ಸ್ವಚ್ಛತಾ ಅಭಿಯಾನ
10 ತಿಂಗಳಲ್ಲಿ ಐದು ವಿವಿಧ ಕಾರ್ಯಕ್ರಮಗಳು

ಮಂಗಳೂರು, ನ.29: ಕಳೆದ ನಾಲ್ಕು ವರ್ಷಗಳಿಂದ ಸ್ವಚ್ಛತಾ ಅಭಿಯಾನವನ್ನು ನಡೆಸುತ್ತಿರುವ ರಾಮಕೃಷ್ಣ ಮಠದಿಂದ ಐದನೆ ಹಾಗೂ ಕೊನೆ ಹಂತದ ಸ್ವಚ್ಛತಾ ಅಭಿಯಾನ ಡಿಸೆಂಬರ್ 2ರಂದು ಆರಂಭಗೊಳ್ಳಲಿದೆ.
ರಾಮಕೃಷ್ಣ ಮಠದಲ್ಲಿ ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಮಠದ ಅಧ್ಯಕ್ಷ ಜಿತಕಾಮಾನಂದ ಸ್ವಾಮೀಜಿ, ಡಿ. 2ರಿಂದ 2019ರ ಅಕ್ಟೋಬರ್ 2ರವರೆಗೆ 10 ತಿಂಗಳ ಕಾಲ ಐದು ವಿಧದ ಕಾರ್ಯಕ್ರಮಗಳು ಅಭಿಯಾನದಲ್ಲಿ ನಡೆಯಲಿವೆ ಎಂದರು.
5ನೆ ಹಂತದ ಕಾರ್ಯಕ್ರಮ ಡಿ.2ರಂದು ಬೆಳಗ್ಗೆ 7-30ರಿಂದ ಸ್ವಚ್ಛತಾ ಅಭಿಯಾನದ ಮೂಲಕ ಉದ್ಘಾಟನೆಗೊಳ್ಳಲಿದೆ. ರಾಮಕೃಷ್ಣ ಮಿಷನ್ ಜಲ್ಪಾಯಗುರಿಯ ಕಾರ್ಯದರ್ಶಿ ಸ್ವಾಮಿ ಶಿವಪ್ರೇಮಾನಂದಜಿ ಉದ್ಘಾಟನೆ ಮಾಡಲಿದ್ದು, ಡಾ.ಎನ್. ವಿನಯ ಹೆಗ್ಡೆ ಹಾಗೂ ವೆಂಕಟೇಶ್ ಎಂ. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸ್ವಚ್ಚತಾ ಸಂಪರ್ಕ ಅಭಿಯಾನ: ಈ ಕಾರ್ಯಕ್ರಮದಡಿ ಈ ವರ್ಷ 500 ಸಂಘ ಸಂಸ್ಥೆಗಳನ್ನು ಸಂಪರ್ಕಿಸಿ 300 ಸ್ವಚ್ಛತಾ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪ್ರತಿನಿತ್ಯ ಸಂಜೆ ಮಂಗಳೂರಿನ ವಿವಿಧೆಡೆ ಈ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಶುಚಿತ್ವದ ಅರಿವು, ಸಾರ್ವಜನಿಕರ ಜವಾಬ್ಧಾರಿ ಹಾಗೂ ಕರ್ತವ್ಯ, ನಮ್ಮ ತ್ಯಾಜ್ಯ ನಮ್ಮ ಹೊಣೆ ಎಂಬ ಪರಿಕಲ್ಪನೆಯಲ್ಲಿ ಮಡಕೆ ಗೊಬ್ಬರದ ಪ್ರಾತ್ಯಕಿಕ್ಷೆ ಹಾಗೂ ಮಡಕೆಗಳ ವಿತರಣೆ ನಡೆಯಲಿದೆ. ಈಗಾಗಲೇ 400 ಸಂಘ ಸಂಸ್ಥೆಗಳನ್ನು ಸಂಪರ್ಕಿಲಾಗಿದೆ. ಕಾರ್ಯಕ್ರಮದಲ್ಲಿ ಸುಮಾರು ಐದು ಸಾವಿರ ಮಡಕೆಗಳನು ವಿತರಿಸುವ ಗುರಿ ಹೊಂದಲಾಗಿದೆ ಎಂದು ಅವರು ಹೇಳಿದರು.
ಸ್ವಚ್ಛ ಮಂಗಳೂರು ಶ್ರಮದಾನ: ಪ್ರತಿ ರವಿವಾರ ಬೆಳಗ್ಗೆ 7ರಿಂದ 10 ಗಂಟೆಯವರೆಗೆ ಸುಮಾರು 44 ವಾರಗಳ ಸ್ವಚ್ಚತಾ ಶ್ರಮದಾನ ನಡೆಯಲಿದೆ. ಪ್ರತಿ ರವಿವಾರ 100ರಿಂದ 200 ಮಂದಿ ಸ್ವಯಂ ಸೇವಕರು ಶ್ರದಾನ ಮಾಡಲಿದ್ದಾರೆ.
ಅಗತ್ಯವಿದ್ದಲ್ಲಿ ಮಾರ್ಗಸೂಚಕ ನಾಮಫಲಕಗಳ ಅಳವಡಿಕೆ- ನವೀಕರಣ, ಬಸ್ ತಂಗುದಾಣಗಳಿಗೆ ಬಣ್ಣ ಬಳಿಯುವುದು, ತ್ಯಾಜ್ಯ ಸುರಿಯುವ ಜಾಗವನ್ನು ಸುಂದರ ತಾಣವನ್ನಾಗಿಸುವುದು, ಪಾರ್ಕ್‌ಗಳ ನಿರ್ಮಾಣ, ಫ್ಲೈ ಓವರ್ ಸುಂದರೀಕರಣ, ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಲಾದ ಅನಧಿಕೃತ ಪೋಸ್ಟರ್ ಬ್ಯಾನರ್ ತೆರವುಗೊಳಿಸುವ ಕಾರ್ಯ ನಡೆಯಲಿದೆ.
ಸ್ವಚ್ಛ ಮನಸ್ಸು: ಶಾಲಾ ವಿದ್ಯಾರ್ಥಿಗಳಲ್ಲಿ ಸ್ವಚ್ಛತೆಯ ಅರಿವು ಮೂಡಿಸಲು ಸುಮಾರು 100 ಶಾಲೆಗಳಲ್ಲಿ ಒಟ್ಟು ಐನೂರು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಪ್ರತಿ ಶಾಲೆಯಿಂದ ನೂರು ಮಕ್ಕಳಂತೆ ಶುಚಿತ್ವದ ವಿಶೇಷ ತರಬೇತಿ ನೀಡಲಾಗುವುದು. ಅದರಲ್ಲಿ ಮೊದಲ ಐನೂರು ವಿದ್ಯಾರ್ಥಿಗಳನ್ನು ಸ್ವಚ್ಛ ಭಾರತ ರಾಯಭಾರಿಯನ್ನಾಗಿ ಗುರುತಿಸಿ ಸನ್ಮಾನಿಸಲಾಗುವುದು. ಈ ಕಾರ್ಯಕ್ರಮ ಮುಂದಿನ ಜೂನ್ನಿಂದ ಅಕ್ಟೋಬರ್‌ವರೆಗೆ ನಡೆಯಲಿದೆ.
ಸ್ವಚ್ಛ ಸೋಚ್: 50 ಕಾಲೇಜುಗಳಲ್ಲಿ ವಿಚಾರ ಸಂಕಿರಣಗಳು: ಕಾಲೇಜ ವಿದ್ಯಾರ್ಥಿಗಳಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲು ದ.ಕ. ಹಾಗೂ ಉಡುಪಿ ಜಿಲ್ಲೆಗಳ ಸುಮಾರು 50 ಕಾಲೇಜುಗಳಲ್ಲಿ ಸ್ವಚ್ಛ ಸೋಚ್ ವಿಚಾರ ಸಂಕಿರಣಗಳನ್ನು ನಡೆಸಲಾಗುವುದು. ಇಬ್ಬರು ಸಂಪನ್ಮೂಲ ವ್ಯಕ್ತಿಗಳಿಂದ ಸ್ವಚ್ಛತೆಯ ಕುರಿತು ಭಾಷಣ, ಪ್ರಾತ್ಯಕ್ಷಿಕೆ, ಸಂವಾದ ಚಟುವಟಿಕೆಯನ್ನು ಆಯೋಜಿಸಲಾಗಿದೆ. ಬಳಿಕ ಜಿಲ್ಲಾ, ವಿಶ್ವವಿದ್ಯಾನಿಲಯ, ಹಾಗೂ ರಾಜ್ಯ ಮಟ್ಟದ ಸ್ವಚ್ಛತಾ ವಿಚಾರ ಸಂಕಿರಣಗಳು ನಡೆಯಲಿವೆ.
ಈ ಕಾರ್ಯಕ್ರಮದ ಉದ್ಘಾಟನೆ ಡಿ. 4ರಂದು ಬೆಳಗ್ಗೆ ರಾಮಕೃಷ್ಣ ಮಠದಲ್ಲಿ ನಡೆಯಲಿದೆ.
ಸ್ವಚ್ಛ ಗ್ರಾಮ ಅಭಿಯಾನ: ಕಳೆದ ಬಾರಿ ದ.ಕ. ಜಿಲ್ಲೆಯ 100 ಗ್ರಾಮಗಳಲ್ಲಿ ಸ್ವಚ್ಛ ಗ್ರಾಮ ಅಭಿಯಾನ ನಡೆಸಲಾಗಿತ್ತು. ಈ ಬಾರಿ ಅದನ್ನು ಉಡುಪಿ ಜಿಲ್ಲೆಗೂ ವಿಸ್ತರಿಸಿ ಅಲ್ಲಿಯ 100 ಗ್ರಾಮ ಸೇರಿ ಅವಿಭಜಿತ ದ.ಕ. ಜಿಲ್ಲೆಯ 200 ಗ್ರಾಮಗಳಲ್ಲಿ 2000 ಸ್ವಚ್ಛತಾ ಕಾರ್ಯಕ್ರಮಗಳನ್ನು ಮಾಡುವ ಗುರಿ ಹೊಂದಲಾಗಿದೆ ಎಂದು ಜಿತಕಾಮಾನಂದಜಿ ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಏಕಗಮ್ಯಾನಂದ ಸ್ವಾಮೀಜಿ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಉಮಾನಾಥ ಕೋಟೆಕಾರು, ದಿಲ್‌ರಾಜ್ ಆಳ್ವ, ರಂಜನ್ ಉಪಸ್ಥಿತರಿದ್ದರು.