ಪತ್ನಿಯರನ್ನು ತ್ಯಜಿಸುವ ಅನಿವಾಸಿ ಭಾರತೀಯರ ವಿರುದ್ಧದ ಮಸೂದೆ ಶೀಘ್ರವೇ ಮಂಡನೆ
ಹೈದರಾಬಾದ್,ನ.29: ಅನಿವಾಸಿ ಭಾರತೀಯ(ಎನ್ನಾರೈ)ರು ತಮ್ಮ ಪತ್ನಿಯರನ್ನು ತ್ಯಜಿಸುವುದನ್ನು ತಡೆಯುವ ತನ್ನ ಪ್ರಯತ್ನಗಳ ಅಂಗವಾಗಿ ಮಸೂದೆಯೊಂದನ್ನು ಸರಕಾರವು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಬುಧವಾರ ಇಲ್ಲಿ ತಿಳಿಸಿದರು.
ಈಗಾಗಲೇ ಸಾಂಸ್ಥಿಕ ವ್ಯವಸ್ಥೆಯೊಂದನ್ನು ನಾವು ಆರಂಭಿಸಿದ್ದೇವೆ. ಇಂತಹ 25 ಎನ್ನಾರೈಗಳ (ಅನಿವಾಸಿ ಭಾರತೀಯ) ಪಾಸ್‌ಪೋರ್ಟ್‌ಗಳನ್ನು ರದ್ದುಗೊಳಿಸಲಾಗಿದೆ ಎಂದು ಬಿಜೆಪಿಯ ಚುನಾವಣಾ ಪ್ರಚಾರಕ್ಕಾಗಿ ನಗರಕ್ಕೆ ಭೇಟಿ ನೀಡಿದ್ದ ಅವರು ಹೇಳಿದರು.
ತಮ್ಮ ಪತ್ನಿಯರನ್ನು ತ್ಯಜಿಸುವ ಮತ್ತು ವರದಕ್ಷಿಣೆಗಾಗಿ ಅವರಿಗೆ ಕಿರುಕುಳ ನೀಡುವ ಎನ್ನಾರೈಗಳನ್ನು ಕಡ್ಡಾಯವಾಗಿ ಬಂಧಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಉತ್ತರಿಸುವಂತೆ ಸರ್ವೋಚ್ಚ ನ್ಯಾಯಾಲಯವು ನ.13ರಂದು ಕೇಂದ್ರಕ್ಕೆ ಸೂಚಿಸಿತ್ತು.
ತಮ್ಮ ಎನ್ನಾರೈ ಗಂಡಂದಿರಿಂದ ಪರಿತ್ಯಕ್ತರಾಗಿರುವ ಮಹಿಳೆಯರ ಗುಂಪೊಂದು ಈ ಅರ್ಜಿಯನ್ನು ಸಲ್ಲಿಸಿದ್ದು,ತಮಗೆ ಕಾನೂನು ಮತ್ತು ಆರ್ಥಿಕ ನೆರವು ನೀಡುವಂತೆಯೂ ಕೋರಿದ್ದಾರೆ.