ಉಡುಪಿ: ಗ್ರಾಪಂ ಕಟ್ಟಡಗಳ ಏಲಂಗೆ ತಾಪಂ ಅಧ್ಯಕ್ಷರಿಂದ ತಡೆ; ಸದಸ್ಯರ ಆಕ್ಷೇಪ
ಉಡುಪಿ, ನ.29: ಬೊಮ್ಮರಬೆಟ್ಟು ಗ್ರಾಪಂನ ಕಟ್ಟಡಗಳನ್ನು ಏಲಂ ಮಾಡುವ ಗ್ರಾಪಂನ ನಿರ್ಣಯಕ್ಕೆ ತಾಪಂ ಅಧ್ಯಕ್ಷೆ ತಡೆಯಾಜ್ಞೆ ನೀಡಿರುವುದಕ್ಕೆ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಬಗ್ಗೆ ಅಲ್ಲಿನ ತಾಪಂ ಸದಸ್ಯನಾದ ತನ್ನಿಂದ ಹಾಗೂ ಗ್ರಾಪಂನಿಂದ ಯಾಕೆ ಯಾವುದೇ ಮಾಹಿತಿ ಕೇಳಿಲ್ಲ ಎಂದು ನಳಿನಿ ಪ್ರದೀಪ್ ರಾವ್ ಅಧ್ಯಕ್ಷತೆಯಲ್ಲಿ ಇಂದು ನಡೆದ ಉಡುಪಿ ತಾಪಂನ 16ನೇ ಸಾಮಾನ್ಯ ಸಭೆಯಲ್ಲಿ ಸದಸ್ಯ ಲಕ್ಷ್ಮೀನಾರಾಯಣ ಪ್ರಭು ಪ್ರಶ್ನಿಸಿದರು.
ಸಭೆಯಲ್ಲಿ ಪ್ರಶ್ನೋತ್ತರದ ವೇಳೆ ಮಾತನಾಡಿದ ಲಕ್ಷ್ಮೀನಾರಾಯಣ ಪ್ರಭು, ಬೊಮ್ಮರಬೆಟ್ಟು ಗ್ರಾಪಂ ನಿರ್ಣಯಕ್ಕೆ ಯಾಕೆ ತಡೆಯಾಜ್ಞೆ ನೀಡಿದ್ದೀರಿ. ಕ್ಲಪ್ತ ಸಮಯದಲ್ಲಿ ಜಿಪಂಗೆ ವರದಿಯನ್ನು ಯಾಕೆ ಕಳುಹಿಸಿಕೊಡಲಿಲ್ಲ ಎಂದು ತಾಪಂ ಅಧ್ಯಕ್ಷರನ್ನು ಪ್ರಶ್ನಿಸಿದರು. ಅವರಿಗೆ ಡಾ.ಸುನೀತಾ ಶೆಟ್ಟಿ ಬೆಂಬಲಿಸಿದರು.
ಇದಕ್ಕೆ ಉತ್ತರಿಸಿದ ಅಧ್ಯಕ್ಷೆ, ಶಾಂತಿಭಂಗ ಆಗುವ ಸಂಭವ ಇದ್ದ ಕಾರಣ ಏಲಂ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿದ್ದೇನೆ. ಜಿಪಂಗೆ ವರದಿ ಕಳುಹಿಸುವುದು ಮೇಲ್ಮನವಿ ಪ್ರಾಧಿಕಾರದ ವಿವೇಚನೆಗೆ ಬಿಟ್ಟ ವಿಚಾರ, ಅದನ್ನು ಸಭೆಯಲ್ಲಿ ಚರ್ಚಿಸುವ ಅಗತ್ಯವಿಲ್ಲ. ಗ್ರಾಪಂ ಮಬಂದಂತೆ ವರ್ತಿಸಬಾರದು ಎಂದರು.
ಅಧಿಕಾರಿಗಳ ಗೈರಿಗೆ ಆಕ್ರೋಶ: ಗ್ರಾಮಸಭೆಗಳಲ್ಲಿ ಜನರು ಹೆಚ್ಚಿನ ಸಖ್ಯೆಯಲ್ಲಿ ಭಾಗವಹಿಸುತ್ತಾರಾದರೂ ಅಧಿಕಾರಿಗಳು ಮಾತ್ರ ಅಧಿಕ ಸಂಖ್ಯೆಯಲ್ಲಿ ಗೈರಾಗುತ್ತಿದ್ದಾರೆ ಎಂದು ಸಭೆಯಲ್ಲಿ ಹಲವು ಸದಸ್ಯರು ಆಕ್ರೋಶ ವ್ಯಕ್ತ ಪಡಿಸಿದರು. ವಿಷಯ ಪ್ರಸ್ತಾಪಿಸಿದ ಸದಸ್ಯ ಸುಧೀರ್ ಕುಮಾರ್ ಶೆಟ್ಟಿ, ಗ್ರಾಪಂ ವ್ಯಾಪ್ತಿಯಲ್ಲಿ 26 ಇಲಾಖೆಗಳ ಪ್ರತಿನಿಧಿಗಳು ಭಾಗವಹಿಸಬೇಕು ಎಂಬ ನಿಯಮವಿದೆ. ಆದರೆ ಯಾರೂ ಅದನ್ನು ಪಾಲಿಸುತ್ತಿಲ್ಲ. ಇಲ್ಲಿ ತಾಪಂ ಸಭೆಗೂ ಪ್ರಮುಖ ಅಧಿಕಾರಿಗಳು ಗೈರು ಹಾಜರಾಗುತಿದ್ದಾರೆ. ಒಮ್ಮೆ ಬಂದ ಅಧಿಕಾರಿ ಮತ್ತೊಮ್ಮೆ ಬರುತ್ತಿಲ್ಲ. ಹೀಗಾಗಿ ನಮಗೆ ಸಮರ್ಪಕ ಉತ್ತರ ಸಿಗುತ್ತಿಲ್ಲ ಎಂದು ದೂರಿದರು.
ಇದಕ್ಕೆ ಉತ್ತರಿಸಿದ ಪ್ರಭಾರ ಇಒ ಮೋಹನ್‌ರಾಜ್, ಒಂದೇ ದಿನದಲ್ಲಿ ಎರಡು ಸಭೆಗಳು ನಡೆದಾಗ ಅಧಿಕಾರಿಗಳು ಕೆಲವೊಮ್ಮೆ ಹಾಜರಾಗಲು ಸಾಧ್ಯ ವಾಗುತ್ತಿಲ್ಲ. ಈ ಬಗ್ಗೆ ಸೂಚನೆ ನೀಡಲಾಗುವುದು ಎಂದರು. ಸದಸ್ಯ ದಿನೇಶ್ ಕೋಟ್ಯಾನ್ ಮಾತನಾಡಿ, ಪಲಿಮಾರು ಪಂಚಾಯಿತಿಯಲ್ಲಿ ನಳ್ಳಿ ನೀರು ಸಂಪರ್ಕಕ್ಕೆ 1,200 ರೂ. ಪಡೆದು ರಶೀದಿ ನೀಡಿದ್ದಾರೆ. ಆದರೆ ವರ್ಷವಾದರೂ ಸಂಪರ್ಕ ನೀಡಿಲ್ಲ. ಖಾಸಗಿ ರಶೀದಿ ನೀಡಿರುವ ಅನುಮಾನ ವಿದೆ. ಅಲ್ಲದೇ ವಿವಿಧ ಇಲಾಖೆಗಳಿಗೆ ಸಲ್ಲಬೇಕಾದ ಲಕ್ಷಾಂತರ ರೂ. ಇನ್ನೂ ಪಾವತಿ ಮಾಡಿಲ್ಲ. ಅಲ್ಲಿ ಅವ್ಯವಹಾರವಾಗಿದ್ದು, ಈ ಬಗ್ಗೆ ಲೋಕಾಯುಕ್ತ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ನೂತನ ಇಒ ಕೆ.ರಾಜು, ಈ ಕುರಿತ ಎಲ್ಲಾ ದಾಖಲೆಗಳನ್ನು ತರಿಸಿಕೊಂಡು ತನಿಖೆ ಮಾಡುತ್ತೇವೆ. ಅಕ್ರಮವಾಗಿರುವುದು ಕಂಡುಬಂದರೆ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ನಾಮ ನಿರ್ದೇಶಿತ ಸದಸ್ಯ ಮಜೂರು ಗ್ರಾಪಂ ಅಧ್ಯಕ್ಷ ಸಂದೀಪ್ ರಾವ್ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕ್ರಿಯಾಯೋಜನೆ ಬಳಿಕ ಹೆಚ್ಚು ವರಿಯಾಗಿ ಸಲ್ಲಿಸಿದ ಅರ್ಜಿಗಳಿಗೆ ಅನುಮೋದನೆ ಸಿಗುತ್ತಿಲ್ಲ. ಇದರಿಂದ ತುರ್ತು ಕಾಮಗಾರಿ ನಡೆಸಲು ಬಯಸುವವರು ಸೌಲಭ್ಯದಿಂದ ವಂಚಿತರಾಗು ತಿದ್ದಾರೆ ಎಂದರು.
ಅಧಿಕಾರಿಗಳು ಸರ್ವೆ ಮಾಡಿ ವರದಿ ನೀಡಿದರೂ ಪಾದೂರು ತೈಲಾಗಾರದ ಸ್ಪೋಟದಿಂದ ಹಾನಿಯಾದ ಮನೆಗಳಿಗೆ ಪರಿಹಾರ ಲಭಿಸಿಲ್ಲ ಎಂದು ಸಂದೀಪ್ ರಾವ್ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಈ ಬಗ್ಗೆ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಕಂಪೆನಿ ಉತ್ತರಿಸಿದೆ. ಇದು ಸಾರ್ವಜನಿಕ ಸಂಸ್ಥೆಯಾಗಿರುವುದರಿಂದ ಸಿಎಸ್‌ಆರ್ ಫಂಡ್ ನೀಡಲು ಬರುವುದಿಲ್ಲ ಎಂದರು.
ಕೃಷಿ ಕುಟುಂಬದ ಬಡ ಹುಡುಗಿ ಡೈರಿಗೆ ಹಾಲು ಹಾಕಲು ತೆರಳುತಿದ್ದ ಸಂದರ್ಭ ಹಾವು ಕಚ್ಚಿ ಮೃತಪಟ್ಟಿದ್ದು, ಸರಕಾರ ಪರಿಹಾರ ನೀಡಬೇಕು ಎಂದು ಸದಸ್ಯೆ ಸುನೀತಾ ಶೆಟ್ಟಿ ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿ ಮೋಹನ್ ರಾಜ್, ಕೃಷಿ ಮಾಡುತ್ತಿದ್ದಾಗ ಮೃತಪಟ್ಟ 8 ಮಂದಿಗೆ ಪರಿಹಾರ ನೀಡಿದ್ದೇವೆ. ಆದರೆ ಇದು ವಿಶೇಷ ಪ್ರಕರಣ ಎಂದು ಪರಿಗಣಸಿ ಎಸಿ ನೇತೃತ್ವದ ಸಮಿತಿಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ಸಂತತಿ ನಕ್ಷೆ, ಬಿಪಿಎಲ್ ಕಾರ್ಡ್, ವೈದ್ಯಕೀಯ ವರದಿಗಳನ್ನು ಸಲ್ಲಿಸುವಂತೆ ಸೂಚಿಸಿದರು.
ಸಭೆಯಲ್ಲಿ ನೂತನ ಇಒ ಕೆ.ರಾಜುಅವರನ್ನು ಸ್ವಾಗತಿಸಲಾಯಿತು. ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಸ್ಥಾಯೀ ಸಮಿತಿ ಅಧ್ಯಕ್ಷ ಭುಜಂಗ ಶೆಟ್ಟಿ ಉಪಸ್ಥಿತರಿದ್ದರು.