‘‘ಒಂದು ಮುಗುಳ್ನಗೆಯಿಂದ ಜೀವನ ಸಾರ್ಥಕ’’: ವಕೀಲರಿಗೆ ನ್ಯಾ.ಕೆ.ಜೋಸೆಫ್ ಹಿತವಚನ
ಹೊಸದಿಲ್ಲಿ,ನ.29: ‘‘ಒಂದು ಮುಗುಳ್ನಗೆಯಿಂದ ಜೀವನ ಸಾರ್ಥಕವಾಗುತ್ತದೆ’’ ಎಂದು ವಕೀಲರಿಗೆ ಕಿವಿಮಾತು ಹೇಳುವುದರೊಂದಿಗೆ ಸರ್ವೋಚ್ಚ ನ್ಯಾಯಾಲಯದ ಮೂರನೇ ಅತ್ಯಂತ ಹಿರಿಯ ನ್ಯಾಯಾಧೀಶ ಕುರಿಯನ್ ಜೋಸೆಫ್ ಅವರು ಗುರುವಾರ ಹುದ್ದೆಯಿಂದ ನಿವೃತ್ತರಾದರು.
ತನ್ನ ಅಧಿಕಾರಾವಧಿಯ ಕೊನೆಯ ದಿನ ಸಹೋದ್ಯೋಗಿಗಳನ್ನುದ್ದೇಶಿಸಿ ಮಾತನಾಡಿದ ಅವರು,ನೀವು ಮುಗುಳ್ನಕ್ಕರೆ ಇತರರೂ ನಿಮ್ಮತ್ತ ಮುಗುಳ್ನಗೆ ಬೀರುತ್ತಾರೆ ಎಂದು ಹೇಳಿದರು. ಎಷ್ಟೇ ಜಟಿಲ ಪ್ರಕರಣದ ವಿಚಾರಣೆ ಸಂದರ್ಭದಲ್ಲಿಯೂ ನ್ಯಾ.ಜೋಸೆಫ್ ಅವರ ಮುಖದಲ್ಲಿನ ಮುಗುಳ್ನಗು ಮಾಸುತ್ತಿರಲಿಲ್ಲ.
ನ್ಯಾ.ಜೋಸೆಫ್ ಅವರು ಸಂಪ್ರದಾಯದಂತೆ ಗುರುವಾರ ಮು.ನ್ಯಾ.ರಂಜನ್ ಗೊಗೊಯಿ ಅವರೊಂದಿಗೆ ನ್ಯಾಯಾಲಯದ ರೂಮ್ ನಂ.1ರಲ್ಲಿ ಆಸೀನರಾಗಿದ್ದರು. ಅವರ ಕುಟುಂಬ ಸದಸ್ಯರೂ ಉಪಸ್ಥಿತರಿದ್ದರು. ನ್ಯಾ.ಕುರಿಯನ್‌ರ ಸ್ಥಾನದಲ್ಲಿ ಮುಗುಳ್ನಗೆಯೊಂದಿಗಿನ ವ್ಯಕ್ತಿಯನ್ನು ನಿಯೋಜಿಸುವಂತೆ ನ್ಯಾ.ಜೋಸೆಫ್ ಅವರು ಮು.ನ್ಯಾ.ಗೊಗೊಯಿ ಅವರನ್ನು ಕೋರಿಕೊಂಡರು.
ನ್ಯಾ.ಜೋಸೆಫ್ ಅವರು 2013,ಮಾರ್ಚ್ ನಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ಪದೋನ್ನತಿಗೊಂಡಿದ್ದರು. ಅದಕ್ಕೂ ಮುನ್ನ ಕೇರಳ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಅವರು ಬಳಿಕ ಹಿಮಾಚಲ ಪ್ರದೇಶ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿದ್ದರು.
ಕೇರಳ ನೆರೆ ಸಂದರ್ಭದಲ್ಲಿ ಜನರಿಂದ ದೇಣಿಗೆಯಾಗಿ ಬಂದಿದ್ದ ಟನ್‌ಗಟ್ಟಲೆ ಪರಿಹಾರ ಸಾಮಗ್ರಿಗಳನ್ನು ವಿಂಗಡಿಸುವಲ್ಲಿ ಅವರು ವ್ಯಸ್ತರಾಗಿದ್ದು ಕಂಡುಬಂದಾಗ ನ್ಯಾ.ಜೋಸೆಫ್ ಅವರ ಮುಗುಳ್ನಗೆ ಮತ್ತು ಮಾನವೀಯ ಸ್ಪರ್ಶ ಮಾಧ್ಯಮಗಳಲ್ಲಿ ಪ್ರಮುಖ ಸುದ್ದಿಯಾಗಿತ್ತು.
ನೆರೆಯಿಂದ ಸಂತ್ರಸ್ತರಾದವರಲ್ಲಿ ಜೋಸೆಫ್ ಅವರ ಸೋದರ ಮತ್ತು ಸೋದರಿಯೂ ಸೇರಿದ್ದು,ಎರ್ನಾಕುಳಂನ ಕಾಲಡಿಯಲ್ಲಿನ ಜೋಸೆಫ್ ನಿವಾಸವೂ ನೀರಿನಲ್ಲಿ ಮುಳುಗಿತ್ತು. ದಿಲ್ಲಿಯಲ್ಲಿ ನೆರೆ ಪರಿಹಾರ ಸಂಗ್ರಹ ಅಭಿಯಾನದಲ್ಲಿ ಸ್ವಯಂಸೇವಕರಾಗಿ ಭಾಗವಹಿಸಿದ್ದ ಅವರು,ಈಗ ಪ್ರತಿಯೊಬ್ಬರೂ ತನ್ನ ಕುಟುಂಬವಾಗಿರುವುದರಿಂದ ಇದು ತನ್ನ ಕರ್ತವ್ಯವಾಗಿದೆ ಎಂದು ಹೇಳಿದ್ದರು.
ನಿವೃತ್ತಿಗೆ ಮುನ್ನಾ ದಿನ ನ್ಯಾ.ಜೋಸೆಫ್ ಅವರು ಕೊಲೆ ಆರೋಪದಲ್ಲಿ ವ್ಯಕ್ತಿಯೋರ್ವನಿಗೆ ವಿಧಿಸಲಾಗಿದ್ದ ಮರಣ ದಂಡನೆಯನ್ನು ಜೀವಾವಧಿ ಶಿಕ್ಷೆಗೆ ತಗ್ಗಿಸಿದ್ದರು.